ಸಮಗ್ರ ತನಿಖೆಯ ಬಳಿಕ ಊಹಾಪೋಹಗಳಿಗೆ ತೆರೆ: ಡಾ.ಜಿ.ಪರಮೇಶ್ವರ್ ಖಚಿತ
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೂರುದಾರ ಪೊಲೀಸ್ ಕಸ್ಟಡಿಯಲ್ಲಿದ್ದು, ಆತನ ಹೇಳಿಕೆಯನ್ನು ಪಡೆದು ಹೇಳಿಕೆ ಆಧಾರದಲ್ಲಿ ಪೊಲೀಸರು ಪ್ರಕರಣದ ತನಿಖೆ ನಡೆಸಲಿದ್ದಾರೆ. ಧರ್ಮಸ್ಥಳ ಪ್ರಕರಣದ ಬಗೆಗಿನ ಎಸ್‌ಐಟಿ ತನಿಖೆ ಮುಂದುವರಿಯಲಿದೆ. ಸಮಗ್ರ ತನಿಖೆ ನಡೆದು ವರದಿ ಬಂದ ಬಳಿಕವಷ್ಟೇ ಎಲ್ಲಾ ಊಹಾಪೋಹಗಳಿಗೂ ತೆರೆ ಬೀಳಿದೆ ಎಂದರು.
ಅನನ್ಯ ಭಟ್ ನಾಪತ್ತೆ ಪ್ರಕರಣದ ದೂರುದಾರೆ ಸುಜಾತಾ ಭಟ್ ಮೇಲೆಯೂ ಎಸ್‌ಐಟಿ ತಂಡ ತನಿಖೆ ನಡೆಸುತ್ತಿದೆ ಎಂದು ಮಾಹಿತಿ ನೀಡಿದರು.
ನಿಯಮ ಸರಳೀಕರಣ..
ಕರಾವಳಿ ಜಿಲ್ಲೆಯ ಧಾರ್ಮಿಕ ಆಚರಣೆಗಳಿಗೆ ವಿಧಿಸಿರುವ ನಿಯಮಗಳನ್ನು ಸರಳಗೊಳಿಸುವ ಬಗ್ಗೆ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವುದಾಗಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು.
ಕರಾವಳಿಯಲ್ಲಿ ಧಾರ್ಮಿಕ ಆಚರಣೆಗಳಿಗೆ ವಿಧಿಸಿರುವ ನಿಯಮಗಳನ್ನು ಸರಳಗೊಳಿಸುವಂತೆ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಮನವಿ ಮಾಡಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದರು.
ಧಾರ್ಮಿಕ ಕಾರ್ಯಕ್ರಮಗಳನ್ನು ಆಚರಿಸಲು ಜನರ ಹಿತದೃಷ್ಟಿಯಿಂದ ಕಾನೂನಿನ ಚೌಕಟ್ಟಿನಲ್ಲಿ ಕೆಲವೊಂದು ನಿಯಮಗಳನ್ನು ಮಾಡಲಾಗಿದೆ. ಅದರಿಂದ ಜನರಿಗೆ ತೊಂದರೆಯಾಗುತ್ತದೆ ಎಂದಾದರೆ ಅದನ್ನು ಸರಿಪಡಿಸಿಕೊಳ್ಳಲಾಗುವುದು. ಈ ಬಗ್ಗೆ ಮಂಗಳೂರಿನಲ್ಲಿ ಸಂಜೆ ಅಧಿಕಾರಿಗಳ ಸಭೆ ಕರೆದಿದ್ದು, ಸಭೆಯಲ್ಲಿ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದರು.