ತುಳು ಅಕಾಡೆಮಿಯ ‘ಡೆನ್ನ ಡೆನ್ನಾನ-ಪದ ಪನ್ಕನ’ ಅಭಿಯಾನಕ್ಕೆ ಚಾಲನೆ
ಅವರು ಆ.22 ರಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಸೋಮೇಶ್ವರದ ಆನಂದಾಶ್ರಮ ಪ್ರೌಢಶಾಲೆಯ ಸಹಯೋಗದಲ್ಲಿ ಆನಂದಾಶ್ರಮ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ತುಳು ಹಾಡುಗಳ ಕಲಿಕಾ ಕಾರ್ಯಾಗಾರ ಮತ್ತು ಹಾಡುಗಳ ಪ್ರಸ್ತುತಿಯ ‘ಡೆನ್ನ ಡೆನ್ನಾನ-ಪದ ಪನ್ಕನ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ತುಳು ಹಾಡುಗಳನ್ನು ಶುಶ್ರಾವ್ಯವಾಗಿ ಹಾಡಲು ಕಲಿಸುವ ‘ಡೆನ್ನ ಡೆನ್ನಾನ-ಪದ ಪನ್ಕನ’ ಕಾರ್ಯಗಾರವು ತುಳುವಿನ ಶ್ರೇಷ್ಠ ಕವಿಗಳ ಹಾಗೂ ಹಾಡುಗಳ ಪರಿಚಯವನ್ನು ವಿದ್ಯಾರ್ಥಿಗಳಿಗೆ ಮಾಡಿಕೊಡಲು ಸಹಕಾರಿಯಾಗಿದೆ, ಮುಂದೆ ವಿದ್ಯಾರ್ಥಿಗಳಿಗೆ ತುಳು ಹಾಡುಗಳನ್ನು ಇತರ ವೇದಿಕೆಗಳಲ್ಲಿ ಪ್ರಸ್ತುತಪಡಿಸಲು ಕೂಡ ಸಹಕಾರಿಯಾಗಲಿದೆ ಎಂದರು.
ತುಳು ಭಾಷೆಯನ್ನು ಉಳಿಸಿ ಮುಂದಿನ ಪೀಳಿಗೆಗೂ ತಲುಪಿಸುವ ಜವಬ್ದಾರಿ ಯುವ ಪೀಳಿಗೆಯದ್ದಾಗಿದೆ. ಎಷ್ಟೋ ಭಾಷೆಗಳು ನಮ್ಮ ಕಣ್ಣೆದುರೇ ನಶಿಸಿ ಹೋಗಿವೆ. ಆದರೆ ಕಳೆದ ಎರಡೂವರೆ ಸಾವಿರ ವರುಷದಿಂದ ನಮ್ಮ ತುಳು ಭಾಷೆಯು ಸದೃಢವಾಗಿ ಉಳಿದು ಬೆಳೆದಿರುವುದು ತುಳು ಭಾಷೆಯ ಸಾಮರ್ಥ್ಯವಾಗಿದೆ ಎಂದು ಅವರು ಹೇಳಿದರು.
ಮನೆಯಲ್ಲಿ ಮಕ್ಕಳಲ್ಲಿ ಪೋಷಕರು ತುಳು ಭಾಷೆಯಲ್ಲೇ ಮಾತನಾಡಬೇಕಿದೆ ಎಂದು ಅವರು ಆಶಯ ವ್ಯಕ್ತಪಡಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಸಿನಿಮಾ ಮತ್ತು ನಾಟಕ ಕಲಾವಿದೆ ರೂಪಶ್ರೀ ವರ್ಕಾಡಿ ಮಾತನಾಡಿ, ತಾಯಿ ಭಾಷೆ ತುಳುವಿನ ಮೇಲೆ ಎಲ್ಲರೂ ಅಪಾರವಾದ ಪ್ರೀತಿ ಇಟ್ಟಿದ್ದಾರೆ. ಭಾಷೆಯ ಉಳಿವಿಗಾಗಿ ತುಳು ಸಾಹಿತ್ಯ ಅಕಾಡೆಮಿ, ತುಳು ಚಿತ್ರರಂಗ ಮತ್ತು ರಂಗಭೂಮಿಯು ಸಾಕಷ್ಟು ಶ್ರಮ ಪಟ್ಟಿದೆ ಎಂದರು.
ಹಿರಿಯ ಗಾಯಕರು, ಸಂಗೀತ ನಿರ್ದೇಶಕರಾದ ತೋನ್ಸೆ ಪುಷ್ಕಳ ಕುಮಾರ್, ಗಾಯಕಿ, ಸಂಗೀತ ಶಿಕ್ಷಕಿ ವಾಣಿ ಸಪ್ರೆ ಅವರು ಸಂಪನ್ಮೂಲ ಕಲಾವಿದರಾಗಿ ಭಾಗವಹಿಸಿದ್ದರು.
ಈ ವೇಳೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ನಿರ್ಮಿಸಿದ, ದಿನೇಶ್ ಅತ್ತಾವರ ನಿರ್ದೇಶನದ ‘ಜಾಗ್‌ರ್ತೆ..!?’ ತುಳು ನಾಟಕ ಪ್ರದರ್ಶನ ನಡೆಯಿತು.
ಸೋಮೇಶ್ವರ ಪುರಸಭಾ ಉಪಾಧ್ಯಕ್ಷ ರವಿಶಂಕರ್ ಸೋಮೇಶ್ವರ, ಆನಂದಾಶ್ರಮ ಪ್ರೌಢಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜೀವನ್ ಸೋಮೇಶ್ವರ, ಕೊಲ್ಯ ಶಾರದಾ ಸೇವಾ ಟ್ರಸ್ಟ್‌ನ ಅಧ್ಯಕ್ಷ ಮೋಹನ್ ಶೆಟ್ಟಿ, ಯಕ್ಷಗಾನ ಕಲಾವಿದರು, ಆನಂದಾಶ್ರಮ ಪ್ರೌಢಶಾಲೆಯ ಹಳೆ ವಿದ್ಯಾರ್ಥಿ ಕುಸುಮಾಕರ ಕುಂಪಲ, ಶಾಲಾ ಮುಖ್ಯೋಪಾಧ್ಯಾಯ ಗುರುಮೂರ್ತಿ ಪಿ. ಮತ್ತಿತರರು ಉಪಸ್ಥಿತರಿದ್ದರು.
ಶಿಕ್ಷಕರಾದ ಪ್ರದೀಪ್ ಕುಮಾರ್ ಸ್ವಾಗತಿಸಿ, ಶ್ರೀನಿವಾಸ್ ಶೆಣೈ ವಂದಿಸಿದರು. ಗಣೇಶ್ ಕೆ. ನಿರೂಪಿಸಿದರು.