ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯ ಭವನ ‘ಭೀಮ ಸೌಧ’ ಉದ್ಘಾಟನೆ

ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯ ಭವನ ‘ಭೀಮ ಸೌಧ’ ಉದ್ಘಾಟನೆ

ಅಂಬೇಡ್ಕರ್ ತತ್ವ ಆದರ್ಶಗಳನ್ನು ಯುವ ಪೀಳಿಗೆ ವರ್ಗಾಯಿಸಬೇಕು: ಯು.ಟಿ. ಖಾದರ್ 


ಉಳ್ಳಾಲ: ಡಾ. ಬಿ.ಆರ್. ಅಂಬೇಡ್ಕರ್ ತತ್ವ ಆದರ್ಶಗಳನ್ನು ಯುವ ಪೀಳಿಗೆ ವರ್ಗಾಯಿಸಬೇಕು. ಅವರ ವ್ಯಕ್ತಿತ್ವದ ಅರ್ಧದಷ್ಟು ಪಾಲು ನಾವು ಜೀವನದಲ್ಲಿ ಅಳವಡಿಸಿಕೊಂಡು ಬರಬೇಕು ಎಂದು ಸ್ಪೀಕರ್ ಯು.ಟಿ. ಖಾದರ್ ಹೇಳಿದರು.

ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ದ.ಕ.ಜಿ.ಪಂ., ಉಳ್ಳಾಲ ತಾ.ಪಂ.ಹಾಗೂ ಮುನ್ನೂರು ಗ್ರಾ.ಪಂ. ಇವುಗಳ ಸಂಯುಕ್ತ ಆಶ್ರಯದಲ್ಲಿ  ಕುತ್ತಾರ್ ರಾಣಿಪುರದಲ್ಲಿ ನಡೆದ ಡಾ. ಬಿ.ಆರ್. ಅಂಬೇಡ್ಕರ್ ಸಮುದಾಯ ಭವನ ‘ಭೀಮ ಸೌಧ’ ಉದ್ಘಾಟನಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಇಂದು ನಾವು ಜತೆಯಾಗಿ ಹೋಗಲು, ದೇಶದ ವಿವಿಧ ಕಡೆಗಳಿಗೆ ಓಡಾಡಲು ಅಂಬೇಡ್ಕರ್ ಅವರ ಸಂವಿಧಾನ ಕಾರಣ. ಎಲ್ಲಾ ಸಮಸ್ಯೆಗಳಿಗೆ ಸಂವಿಧಾನ ಔಷಧಿ ಆಗಿದೆ ಎಂದು ಹೇಳಿದರು.

ಈ ಕಟ್ಟಡದ ಕಾಮಗಾರಿ ಅರ್ಧದಲ್ಲೇ ಸ್ಥಗಿತಗೊಂಡಿತ್ತು. ಈ ಸಂದರ್ಭದಲ್ಲಿ ಯಾರೂ ಕೂಡ ಈ ಕಡೆ ಗಮನ ಕೊಟ್ಟಿಲ್ಲ. ಈ ಕಟ್ಟಡದ ಕಾಮಗಾರಿ ಈಗ ಪೂರ್ಣ ಆಗಿದೆ. ಅಭಿವೃದ್ಧಿ ಕಾಮಗಾರಿ ಸ್ಥಳೀಯ ಜನಪ್ರತಿನಿಧಿಗಳ ಜವಾಬ್ದಾರಿ. ಪಂಚಾಯತ್ ಯಾವುದೇ ಕಾರ್ಯ ಮಾಡುವಾಗ ಸ್ಥಳೀಯರನ್ನು ವಿಶ್ವಾಸ ತೆಗೆದು ಕೊಳ್ಳಬೇಕು ಎಂದು ಮುನ್ನೂರು ಗ್ರಾ.ಪಂ. ಪಿಡಿಒ, ಸಿಬ್ಬಂದಿಗೆ ಸೂಚನೆ ನೀಡಿದರು.

ಕೀ ಸಮಸ್ಯೆ ಇತ್ಯರ್ಥ: 

ದಲಿತರ ಕಾಲೋನಿಯಲ್ಲಿ ನಿರ್ಮಾಣ ಆಗಿರುವ ಅಂಬೇಡ್ಕರ್ ಸಮುದಾಯ ಭವನದ ಕೀಲಿಕೈ ನಮಗೆ ಕೊಡಬೇಕು ಎಂಬುದು ದಲಿತ ಮುಖಂಡರು ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಮಾತುಕತೆ ಕೂಡ ನಡೆದಿತ್ತು. ಕೀಲಿಕೈ ವಿಚಾರದಲ್ಲಿ ದಲಿತ ಮುಖಂಡರು ದೂರ ನಿಂತು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಸಂದರ್ಭದಲ್ಲಿ ಸ್ಪೀಕರ್ ಯು.ಟಿ. ಖಾದರ್ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ದಲಿತ ಮುಖಂಡ ಮಾಯಿಲ ಅವರ ಮೂಲಕವೇ ಭವನದ ಉದ್ಘಾಟನೆ ನೆರವೇರಿಸಿದರು.

ಕಟ್ಟಡದ ಮೇಲುಸ್ತುವಾರಿ ವಿಚಾರದಲ್ಲಿ ಒಬ್ಬರಿಗೆ ಜವಾಬ್ದಾರಿ ನೀಡಿದರೆ ನಿರ್ವಹಣೆ ಕಾಮಗಾರಿ ಸಮಸ್ಯೆ ಆಗುತ್ತದೆ. ಇದಕ್ಕೊಂದು ಸಮಿತಿ ಆಗಬೇಕು. ಈ ಕಟ್ಟಡದ ಮೇಲೆ ಛಾವಣಿ ಅಳವಡಿಸಿ ಸಭಾಂಗಣ ಮಾಡಲಾಗುವುದು ಎಂದು ಈ ಸಂದರ್ಭದಲ್ಲಿ ಭರವಸೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ ಬೋಳಿಯಾರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್, ಗೇರು ನಿಗಮದ ಅಧ್ಯಕ್ಷ ಮಮತಾ ಗಟ್ಟಿ, ಮಾಜಿ ಜಿ.ಪಂ. ಸದಸ್ಯೆ ಧನಲಕ್ಷ್ಮಿ ಗಟ್ಟಿ, ವಿಲ್ಪ್ರೇಡ್ ಸೋಜ ಮಾಯಿಲ, ಜಯಪ್ರಕಾಶ್, ಮುನ್ನೂರು ಗ್ರಾ.ಪಂ. ಅಧ್ಯಕ್ಷ ರೆಹನಾಭಾನು, ಉಪಾಧ್ಯಕ್ಷ ಮಹಾಬಲ ದೆಪ್ಪಲಿಮಾರ್, ಜಿ.ಪಂ.ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನರ್ವಡೆ ವಿನಾಯಕ ಕಾರ್ಬಾರಿ, ಉಳ್ಳಾಲ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಗುರುದತ್ ಜಿ.ಪಂ. ಯೋಜನಾ ನಿರ್ದೇಶಕ ಜಯರಾಮ್, ಮಾದಪ್ಪ, ತಾ.ಪಂ. ಮಾಜಿ ಸದಸ್ಯ ವಿಲ್ಮಾ, ಹಿರಿಯಾ ಜನಪದ ಕಲಾವಿದೆ ತಿಮ್ಮಕ್ಕ, ಸುರೇಖಾ, ತಾ.ಪಂ. ಗ್ಯಾರಂಟಿ ಸಮಿತಿ ಅಧ್ಯಕ್ಷ ರಫೀಕ್ ಮತ್ತಿತರರು ಉಪಸ್ಥಿತರಿದ್ದರು.

ಮುನ್ನೂರು ಗ್ರಾ.ಪಂ. ಸದಸ್ಯ ಮುಸ್ತಫಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಿಡಿಒ ಶ್ರೀಕಾಂತ್ ಸಿಂತಿಗೇರ ಸ್ವಾಗತಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article