ಮಹಿಳಾ ಸಂಜೀವಿನಿ ಒಕ್ಕೂಟದ ‘ಅಕ್ಕ ಕೆಫೆ’ಗೆ ಸ್ಪೀಕರ್ ಚಾಲನೆ
ಬಳಿಕ ಅವರು ಮಾತನಾಡಿ, ಕೌಶಲ್ಯಾಭಿವೃದ್ಧಿ ಉದ್ಯಮಶೀಲತಾ ಮತ್ತು ಜೀವನೋಪಾಯ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಎನ್‌ಆರೆಲ್‌ಎಂ)-ಸಂಜೀವಿನಿ, ಜಿಲ್ಲಾ ಪಂಚಾಯತ್ ಮಹತ್ವಾಂಕ್ಷೆಯ ಯೋಜನೆ ಇದಾಗಿದೆ. ರಾಜ್ಯ ಸರ್ಕಾರದ ಮಹಿಳಾ ಅಭಿವೃದ್ಧಿಗೆ ಬಜೆಟ್‌ನಲ್ಲಿ ಘೋಷಣೆಯಾಗಿರುವ ಅಕ್ಕ ಕೆಫೆಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ 2 ಕೆಫೆಗಳು ಅನುಮೋದನೆಗೊಂಡಿವೆ ಎಂದು ಹೇಳಿದರು.
ಸಂಪೂರ್ಣವಾಗಿ ಮಹಿಳೆಯರಿಂದಲೇ ಕಾರ್ಯನಿರ್ವಹಿಸುವುದು ಅಕ್ಕ ಕೆಫೆಯ ವಿಶೇಷತೆಯಾಗಿದೆ. ಶುಚಿ ಮತ್ತು ರುಚಿಯಾದ ಆಹಾರವನ್ನು ಸಾರ್ವಜನಿಕರು ಅಕ್ಕ ಕೆಫೆಯಲ್ಲಿ ಸವಿಯಬಹುದು. ನೂತನ ಅಕ್ಕ ಕೆಫೆ ಉದ್ಘಾಟಿಸಿದ ಸ್ಪೀಕರ್, ಮಹಿಳಾ ಸಬಲೀಕರಣಕ್ಕೆ ಇದೊಂದು ಮಹತ್ವದ ಯೋಜನೆಯಾಗಿದೆ ಎಂದು ಪ್ರಶಂಸಿಸಿದರು.
ಈ ಸಂದರ್ಭದಲ್ಲಿ ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಗಟ್ಟಿ, ಜಿ.ಪಂ. ಸಿಇಒ ವಿನಾಯಕ ನರ್ವಡೆ, ಯೋಜನಾ ನಿರ್ದೇಶಕ ಜಯರಾಂ, ತಾ.ಪಂ. ಕಾರ್ಯ ನಿರ್ವಹಣಾ ಅಧಿಕಾರಿ ಗುರುದತ್, ಮುನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ರೆಹನಾ ಬಾನು ಮತ್ತಿತರರು ಇದ್ದರು.
