
ಸ್ವಪ್ರಜ್ಞೆಯನ್ನು ಜಾಗೃತಗೊಳಿಸಿದ ರಾಣಿ ಅಬ್ಬಕ್ಕ: ಪ್ರೊ. ಜಯಲಕ್ಷ್ಮೀ
Thursday, September 18, 2025
ಬಂಟ್ವಾಳ: ನಾಲ್ಕೂವರೆ ಶತಮಾನಗಳಿಗೂ ಹಿಂದೆಯೇ ವಿದೇಶಿ ಶಕ್ತಿಗಳ
ವಿರುದ್ಧ ಸೆಟೆದು ನಿಂತ ರಾಣಿ ಅಬ್ಬಕ್ಕ ಈ ದೇಶದ ಸ್ವಪ್ರಜ್ಞೆಯನ್ನು ಜಾಗೃತಗೊಳಿಸಿದ
ವೀರ, ಧೀರ, ಶೂರ ಮಹಿಳೆ ಎಂದು ಕಲ್ಲಡ್ಕ ಶ್ರೀ ರಾಮ ಪ್ರಥಮ ದರ್ಜೆ ಮಹಾವಿದ್ಯಾಲಯದ ಸಹಾಯಕ
ಪ್ರಾಧ್ಯಾಪಕಿ ಪ್ರೊ. ಜಯಲಕ್ಮೀ ಹೇಳಿದರು.
ಕರ್ನಾಟಕ ರಾಜ್ಯ
ಮಹಾ ವಿದ್ಯಾಲಯ ಶಿಕ್ಷಕ ಸಂಘ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜು ಸಿದ್ಧಕಟ್ಟೆ ಇವುಗಳ
ಜಂಟಿ ಸಹಯೋಗದಲ್ಲಿ ಅಬ್ಬಕ್ಕ-500 ಪ್ರೇರಣದಾಯಿ 100 ಉಪನ್ಯಾಸಗಳ ಸರಣಿಯ 77ನೇ ಉಪನ್ಯಾಸ
ಕಾರ್ಯಕ್ರಮದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ರಾಣಿ
ಅಬ್ಬಕ್ಕ ಯುದ್ಧ ತಂತ್ರದಲ್ಲಿ ನಿಪುಣಳಾಗಿ ಪೋರ್ಚುಗೀಸರ ವಿರುದ್ಧ ತನ್ನ ಸೈನ್ಯವನ್ನು
ಸಂಘಟಿಸಿ ಹೋರಾಡಿದ್ದಷ್ಟೇ ಅಲ್ಲ,ವ್ಯಾಪಾರ ವಹಿವಾಟುಗಳ ವ್ಯವಸ್ಥೆಯಲ್ಲಿಯೂ ತನ್ನ
ಆಡಳಿತಕ್ಕೊಳಪಟ್ಟ ಪ್ರದೇಶವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಿದ ಆದರ್ಶ ಮಹಿಳೆ ಎಂದು
ಅವರು ಹೇಳಿದರು. ಕರ್ನಾಟಕ ರಾಜ್ಯ ಮಹಾ ವಿದ್ಯಾಲಯ ಶಿಕ್ಷಕ ಸಂಘದ ಉಡುಪಿ ಜಿಲ್ಲಾ
ಪ್ರಮುಖರಾದ ಯಶವಂತ ಡಿ. ಕುದ್ರೋಳಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾಲೇಜಿನ
ಪ್ರಾಂಶುಪಾಲ ಡಾ.ಗಿರೀಶ್ ಭಟ್ ಇವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಇತ್ತೀಚಿನ
ವರ್ಷಗಳಲ್ಲಿ ಸ್ಥಳೀಯ, ಪ್ರಾದೇಶಿಕ ಮತ್ತು ಮೌಖಿಕ ಚರಿತ್ರೆಗೆ ಮಹತ್ವ ಸಿಗುತ್ತಿದ್ದು,
ಸ್ಥಳೀಯ ಅರಸು ಮನೆತನಗಳ ಕುರಿತು ಅಧ್ಯಯನ ನಡೆಯಬೇಕಾಗಿದೆ. ಬ್ರಿಟಿಷರು ಬರುವವರೆಗೆ
ಆರ್ಥಿಕವಾಗಿ ಜಗತ್ತಿನಲ್ಲೇ ಮುಂಚೂಣಿಯಲ್ಲಿದ್ದ ಭಾರತದ ಚರಿತ್ರೆಯನ್ನು ವಸಾಹತುಶಾಹಿ
ದೃಷ್ಟಿಕೋನದಿಂದ ಬಿಡುಗಡೆಗೊಳಿಸಬೇಕಾದ ಅನಿವಾರ್ಯತೆ ಇದೆ’ ಎಂದು ಹೇಳಿದರು.
ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ.ಹರಿಪ್ರಸಾದ್ ಬಿ ಶೆಟ್ಟಿ, ಕಾರ್ಯಕ್ರಮದ ಸಂಯೋಜಕರಾದ ಡಾ.ಹರಿಣಾಕ್ಷಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಕೀರ್ತನ ಸ್ವಾಗತಿಸಿ, ರಶ್ಮಿ ವಂದಿಸಿದರು. ಬಬಿತ ಕಾರ್ಯಕ್ರಮ ನಿರೂಪಿಸಿದರು.