ಸೆ.15ರಂದು ಕದ್ರಿ ಮೊಸರು ಕುಡಿಕೆ ಉತ್ಸವ
ಮಂಗಳೂರು: ಕದ್ರಿ ಕ್ಷೇತ್ರದ ಶ್ರೀ ಕೃಷ್ಣ ಜನ್ಮ ಮಹೋತ್ಸವ ಸಮಿತಿ ವತಿಯಿಂದ ಸೆ. 15ರಂದು ಶ್ರೀ ಗೋಕುಲಾಷ್ಟಮಿ ಮತ್ತು ಶ್ರೀ ಕೃಷ್ಣ ಲೀಲೋತ್ಸವ ಪ್ರಯುಕ್ತ ಮೊಸರು ಕುಡಿಕೆ ನಡೆಯಲಿದೆ.
ಸಂಜೆ 4 ಗಂಟೆಗೆ ಸರಿಯಾಗಿ ಕದ್ರಿ ಮಂಜುನಾಥ ದೇವಸ್ಥಾನದ ರಾಜಾಂಗಣದಲ್ಲಿ ಹಾಕಿರುವ ‘ನಂದಗೋಕುಲ’ ವೇದಿಕೆಯಲ್ಲಿ ಮೊಸರು ಕುಡಿಕೆ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ಗೋಕುಲ್ ಕದ್ರಿಯವರು ಬುಧವಾರ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಉಡುಪಿ ಶ್ರೀ ಶಂಕರಪುರ ಕ್ಷೇತ್ರದ ಸಾಯಿ ಈಶ್ವರ ಗುರೂಜಿ ಆಶೀರ್ವಚನದಲ್ಲಿ ನಡೆಯಲಿರುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕದ್ರಿ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ. ಎ. ಜನಾರ್ದನ ಶೆಟ್ಟಿ ವಹಿಸಲಿದ್ದಾರೆ. ಈ ಬಾರಿ ಕದ್ರಿ ದೇವಳದ ಹೊರಾಂಗಣದಲ್ಲಿ ಸುಮಾರು 3000 ದಷ್ಟು ಮೊಸರು ಕುಡಿಕೆಗಳನ್ನು ಅಳವಡಿಸಲಾಗುವುದು. ನೋಂದಣಿಯಾದ ತಂಡಗಳಿಗೆ ಮಾತ್ರವೇ ಮೊಸರು ಕುಡಿಕೆ ಒಡೆಯಲು ಅವಕಾಶ ನೀಡಲಾಗುತ್ತದೆ. ಅಡಿಕೆ ಮರದ ಏರು ಕಂಬ ಸ್ಪರ್ಧೆಯು ಕೂಡ ನಡೆಯಲಿದೆ ಹಿಂದೆಲ್ಲಾ ಈ ಏರು ಕಂಬಕ್ಕೆ ಹಲವು ಮಂದಿ ಸ್ಪಽಗಳಿರುತ್ತಿದ್ದರು. ಈಗ ಬೆರಳೆಣಿಕೆಯ ಮಂದಿ ಮಾತ್ರ ಸ್ಪಽಸುತ್ತಿದ್ದಾರೆ. ನಿಗದಿತ ಸಮಯದಲ್ಲಿ ಉತ್ಸವವನ್ನು ಕೊನೆಗೊಳಿಸಲು ಸಂಘಟಕರು ಪ್ರಯತ್ನಿಸಲಿದ್ದಾರೆ ಎಂದು ಸಮಿತಿಯ ಉಪಾಧ್ಯಕ್ಷ ಸುಧಾಕರ ರಾವ್ ಪೇಜಾವರ ತಿಳಿಸಿದರು.
ಪ್ರಧಾನ ಕಾರ್ಯದರ್ಶಿ ಆನಂದ್ ಕದ್ರಿ, ಕೋಶಾಧಿಕಾರಿ ಸಂದೀಪ್ ಕದ್ರಿ, ಉಪಾಧ್ಯಕ್ಷರಾದ ಕೆ.ಜೆ. ದೇವಾಡಿಗ, ಕಿರಣ್ ಕುಮಾರ ಜೋಗಿ ಉಪಸ್ಥಿತರಿದ್ದರು.