ತಿಮರೋಡಿ ಗಡಿಪಾರಿಗೆ ವಿರೋಧ: ಸೆ.29 ರ ಪ್ರತಿಭಟನೆಗೆ ಅನುಮತಿ ನಿರಾಕರಣೆ
ಮಂಗಳೂರು: ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಸ್ಥಾಪಕಾಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿಯನ್ನು ಗಡಿಪಾರು ಮಾಡಿ ಆದೇಶ ಮಾಡಿರುವ ವಿರುದ್ಧ ರಾಷ್ಟ್ರೀಯ ಹಿಂದೂಜಾಗರಣ ವೇದಿಕೆಯಿಂದ ಸೆ.29 ರಂದು ಬೆಳ್ತಂಗಡಿ ಆಡಳಿತ ಸೌಧದ ಮುಂದೆ ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆಗೆ ಅನುಮತಿ ನಿರಾಕರಿಸಿ ಬೆಳ್ತಂಗಡಿ ತಹಶೀಲ್ದಾರ್ ಆದೇಶ ಹೊರಡಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ಉಜಿರೆಯ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಒಂದು ವರ್ಷ ಗಡಿಪಾರು ಮಾಡಿ ಸೆ.18 ರಂದು ಪುತ್ತೂರು ಸಹಾಯಕ ಆಯುಕ್ತ (ಎಸಿ) ಸ್ಟೆಲ್ಲಾ ವರ್ಗಿಸ್ ಆದೇಶ ಹೊರಡಿಸಿದ್ದರು.
ಈ ಗಡಿಪಾರು ಆದೇಶದ ವಿರುದ್ಧ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಬೆಳ್ತಂಗಡಿ ಅಧ್ಯಕ್ಷ ಅನಿಲ್ ಕುಮಾರ್ ಅಂತರ ಅವರು ಪ್ರತಿಭಟನೆ ನಡೆಸಲು ಅನುಮತಿ ಕೋರಿ ಸೆ.25 ಬೆಳ್ತಂಗಡಿ ತಹಶೀಲ್ದಾರ್ ಗೆ ಅರ್ಜಿ ಸಲ್ಲಿಸಿದ್ದರು.
ಪ್ರತಿಭಟನೆಗೆ ಅನುಮತಿ ಕೋರಿ ಸಲ್ಲಿಸಲಾದ ಈ ಅರ್ಜಿ ಪರಿಶೀಲನೆ ಮಾಡಿದ ಬೆಳ್ತಂಗಡಿ ಪೊಲೀಸರು, ಸಾರ್ವಜನಿಕ ಶಾಂತಿಗೆ ಭಂಗವನ್ನುಂಟು ಮಾಡಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗುವ ಆಗುವ ಸಂಭವ ಇರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಅನುಮತಿ ನೀಡದಂತೆ ಪೊಲೀಸರು ಅಭಿಪ್ರಾಯ ವ್ಯಕ್ತಪಡಿಸಿದ ಮೇರೆಗೆ ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ ಅವರು ಸೆ.26 ರಂದು ಪ್ರತಿಭಟನೆಗೆ ಅನುಮತಿ ನಿರಾಕರಿಸಿ ಹಿಂಬರಹ ನೀಡಿದ್ದಾರೆ.
ವಿಚಾರಣೆ ಮುಂದೂಡಿಕೆ..
ಸೌಜನ್ಯ ಪರ ನ್ಯಾಯ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ದಾಖಲಾಗಿರುವ ಅಕ್ರಮ ಶಸ್ತ್ರಾಸ್ತ್ರ ಹೊಂದಿರುವ ಆರೋಪ ಪ್ರಕರಣಕ್ಕೆ ಸಂಬಂಧಿಸಿ ಸಲ್ಲಿಸಲಾದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ಮಂಗಳೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಸೆ.30ಕ್ಕೆ ಮುಂದೂಡಿದೆ.
ತಿಮರೋಡಿ ಅವರು ತಮ್ಮ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಅಕ್ರಮ ಶಸ್ತ್ರಾಸ್ತ್ರ ಹೊಂದಿರುವ ಆರೋಪ ಪ್ರಕರಣದ ಬಗ್ಗೆ ಮಂಗಳೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.
ತಿಮರೋಡಿ ಅವರ ನಿರೀಕ್ಷಣಾ ಜಾಮೀನು ಅರ್ಜಿಗೆ ಸಂಬಂಧಿಸಿ ಲಿಖಿತ ಆಕ್ಷೇಪಣೆಯನ್ನು ಸಲ್ಲಿಸಲು ಸರಕಾರಿ ಅಭಿಯೋಜಕರು ಕಾಲಾವಕಾಶ ಕೋರಿರುವ ಹಿನ್ನೆಲೆಯಲ್ಲಿ ಜಿಲ್ಲಾ ಸೆಶನ್ಸ್ ನ್ಯಾಯಾಲಯವು ಅವರಿಗೆ ಸೆ.30ರ ತನಕ ಕಾಲಾವಕಾಶ ನೀಡಿತು.