ಚಿನ್ನಯ್ಯ ಹೇಳಿಕೆ ದಾಖಲು ಪ್ರಕ್ರಿಯೆ ಪೂರ್ಣ
Saturday, September 27, 2025
ಮಂಗಳೂರು: ಧರ್ಮಸ್ಥಳ ಪ್ರಕರಣದಲ್ಲಿ ಚಿನ್ನಯ್ಯನ ಹೇಳಿಕೆ ನೀಡುವ ಕಾರ್ಯ ಇಂದು ಪೂರ್ಣಗೊಂಡಿದೆ. ಬೆಳ್ತಂಗಡಿ ಕೋರ್ಟ್ ಗೆ ಸೆ.27 ರಂದು ಬೆಳಗ್ಗೆ ಶಿವಮೊಗ್ಗ ಪೊಲೀಸರು ಕರೆದುಕೊಂಡು ಬಂದಿದ್ದರು. ಬೆಳ್ತಂಗಡಿ 11.30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಹೇಳಿಕೆ ನೀಡಿದ್ದು, ಊಟದ ಬಳಿಕ ಮತ್ತೆ 2.45 ರಿಂದ 4.30 ಗಂಟೆಯವರೆಗೆ ನ್ಯಾಯಾಧೀಶರ ಮುಂದೆ ಬಿಎನ್‌ಎಸ್ 183 ಹೇಳಿಕೆ ನೀಡಿದ್ದಾನೆ.
ಸಾಕ್ಷಿ ದೂರುದಾರನಾಗಿ ಬಂದು ಬಳಿಕ ಆರೋಪಿಯಾದ ಚಿನ್ನಯ್ಯನ್ನು ಎಸ್.ಐ.ಟಿ ಬಂಧಿಸಿ ಆತನ ವಿರುದ್ದ ಪ್ರಕರಣ ದಾಖಲಿಸಿತ್ತು. ಈ ವೇಳೆ ಚಿನ್ನಯ್ಯ ತಾನು ಆರಂಭದಲ್ಲಿ ನ್ಯಾಯಾಧೀಶರ ಮುಂದೆ ನೀಡಿದ್ದ ಹೇಳಿಕೆಗೆ ಬದ್ದನಾಗಿಲ್ಲ ಎಂದೂ ಹೊಸ ಹೇಳಿಕೆ ನೀಡುವುದಾಗಿಯೂ ಕೇಳಿಕೊಂಡಿದ್ದ. ಅದರಂತೆ ಆತನ ಹೇಳಿಕೆ ದಾಖಲಿಸಲು ದಿನ ನಿಗದಿಪಡಿಸಲಾಗಿತ್ತು.
ಸೆ.23ರಂದು ಆತ ಹೇಳಿಕೆ ನೀಡಲು ಆರಂಭಿಸಿದ್ದ. ಹೇಳಿಕೆ ಪೂರ್ಣಗೊಳ್ಳದ ಹಿನ್ನಲೆಯಲ್ಲಿ ಸೆ.25 ರಂದು ಹಾಗೂ ಸೆ27 ರಂದು ಹೀಗೆ ಮೂರು ದಿನಗಳ ಕಾಲ ಆತನ ಹೇಳಿಕೆ ದಾಖಲಿಸುವ ಕಾರ್ಯ ನಡೆದಿತ್ತು. ಇಂದು ಸಂಜೆಯ ವೇಳೆಗೆ ಆತನ ಹೇಳಿಕೆ ಪೂರ್ಣಗೊಂಡಿದ್ದು ಆತನನ್ನು ಮರಳಿ ಶಿವಮೊಗ್ಗ ಜೈಲಿಗೆ ಕಳುಹಿಸಲಾಗಿದೆ.
ಇದೀಗ ಈತನ ಹೇಳಿಕೆಯ ದಾಖಲೆಗಳು ಎಸ್.ಐ.ಟಿ ಅಧಿಕಾರಿಗಳ ಕೈ ಸೇರಿದ್ದು, ಈ ಬಗ್ಗೆ ತನಿಖೆ ಆರಂಭಿಸಲಿದ್ದಾರೆ.