ಪಡಿತರ ಬೀಟಿ ಅಂಗಡಿ ಮಾಲಕಿಗೆ ಮಾನಸಿಕ ಕಿರುಕುಳ: ಗ್ರಾಹಕರ ವಿರುದ್ಧ ಕ್ರಮಕ್ಕೆ ಆಗ್ರಹ
ವಿಡಿಯೋ ವೀಕ್ಷಿಸಿದ ನಂತರ ನ್ಯಾಯಬೆಲೆ ಅಂಗಡಿಯವರ ಬಗ್ಗೆ ಸಾರ್ವಜನಿಕರಲ್ಲಿ ತಪ್ಪು ಕಲ್ಪನೆ ಮೂಡಿದೆ. ಗ್ರಾಹಕ ಪ್ರಶ್ನಿಸಿದ ವಿಚಾರ ಸರಿಯಾಗಿದೆ ಎಂದು ತಿಳಿದು ಸಾರ್ವಜನಿಕರು ಎಲ್ಲ ಅಂಗಡಿದಾರರನ್ನು ಸಂಶಯದ ದೃಷ್ಟಿಯಲ್ಲಿ ನೋಡುತ್ತಿದ್ದಾರೆ. ಆದರೆ, ನ್ಯಾಯಬೆಲೆ ಅಂಗಡಿದಾರರಿಗೆ ಪ್ರತಿ ಕ್ವಿಂಟಾಲ್ಗೆ ಲಾಭಾಂಶವನ್ನು ೫೬ ರೂ. ನಿಗದಿಪಡಿಸಿದ್ದು, ಈ ಪೈಕಿ 36 ರೂ. ನಗದು ರೂಪದಲ್ಲಿ ಹಾಗೂ 20 ರೂ. ಪ್ರತಿ ಕ್ವಿಂಟಾಲ್ನ ಎರಡು ಗೋಣಿಚೀಲದ ರೂಪದಲ್ಲಿ ಪಡೆದುಕೊಳ್ಳುವಂತೆ ಸರಕಾರ ಆದೇಶಿಸಿದೆ.
2018ರ ನವೆಂಬರ್ 6 ರಿಂದ ಈ ಆದೇಶ ಜಾರಿಯಲ್ಲಿದೆ. ಗೋಣಿಚೀಲವನ್ನು ನಾವು ಉಚಿತವಾಗಿ ನೀಡುವಂತಿಲ್ಲ. ಈ ಬಗ್ಗೆ ತಿಳುವಳಿಕೆ ಇಲ್ಲದ ಗ್ರಾಹಕರು ಅಂಗಡಿ ಮಾಲಕರನ್ನು ಬೆದರಿಸುವಂತಾಗಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಸರಕಾರಿ ಪಡಿತರ ವಿತರಕರ ಸಂಘದ ಅಧ್ಯಕ್ಷ ಕೇಶವಮೂರ್ತಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ವನ್ ನೇಶನ್, ಒನ್ ರೇಶನ್ ಕಾರ್ಡ್ ಎಂಬ ಕೇಂದ್ರ ಸರಕಾರದ ಆದೇಶದಂತೆ ಯಾವುದೇ ಅರ್ಹ ವ್ಯಕ್ತಿ ಅಕ್ಕಿ ಕೇಳಿದರೂ ನೀಡಬೇಕಾಗಿದೆ. ಎಲ್ಲ ಪಡಿತರ ಅಂಗಡಿದಾರರಿಗೆ ಹೆಚ್ಚುವರಿಯಾಗಿ ಶೇ.೧೦ರಷ್ಟು ಅಕ್ಕಿ ವಿತರಿಸಬೇಕು ಎಂದು ಸ್ಪೀಕರ್ ಯು.ಟಿ. ಖಾದರ್ ಅವರು ಇತ್ತೀಚೆಗೆ ವಿಧಾನಸಭೆಯಲ್ಲಿ ತಿಳಿಸಿದ್ದು, ತಕ್ಷಣ ಅದನ್ನು ಜಾರಿ ಮಾಡಬೇಕು. ಎಪಿಎಲ ಕಾರ್ಡ್ದಾರರಿಗೂ ಅಕ್ಕಿ ನೀಡಬೇಕು. ಪಡಿತರ ವಿತರಕರಿಗೆ ಕಮಿಶನ್ ನೀಡದೆ ನಾಲ್ಕು ತಿಂಗಳಾಗಿದ್ದು, ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಕಟೀಲು ಪಡಿತರ ಅಂಗಡಿಯ ದೀಪಾ ನಾಯಕ್ ಮಾತನಾಡಿ, ಸತೀಶ ಹಾಗೂ ವಿಜಯ ಎಂಬ ಇಬ್ಬರು ಗ್ರಾಹಕರು ಪ್ರತಿ ಬಾರಿ ಅಕ್ಕಿಗೆಂದು ಬಂದಾಗಲೂ ಗೋಣಿಚೀಲ ಉಚಿತವಾಗಿ ನೀಡುವಂತೆ ಗಲಾಟೆ ನಡೆಸುತ್ತಾರೆ. ಇತ್ತೀಚೆಗೆ ಗೋಣಿಚೀಲ ನೀಡುವಂತೆ ಸತೀಶ ಎಂಬವರು ವಾಗ್ವಾದ ನಡೆಸಿ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ. ಇದರಿಂದಾಗಿ ನಾನು ಮಾನಸಿಕ ಹಿಂಸೆ ಅನುಭವಿಸುತ್ತಿದ್ದೇನೆ. ಈ ಬಗ್ಗೆ ಆಹಾರ ಸಚಿವರು, ತಹಸೀಲ್ದಾರ್, ಆಹಾರ ಇಲಾಖೆ ಉಪನಿರ್ದೇಶಕರಿಗೆ ದೂರು ನೀಡಿದ್ದೇನೆ. ವಿಡಿಯೋ ಡಿಲೀಟ್ ಮಾಡಿಸುವಂತೆ ಬಜ್ಪೆ ಠಾಣೆಗೆ ಆಗಸ್ಟ್ 22ರಂದು ದೂರು ನೀಡಿದ್ದರೂ, ಇದುವರೆಗೆ ಕ್ರಮ ಆಗಿಲ್ಲ. ತಕ್ಷಣ ವಿಡಿಯೋ ಡಿಲೀಟ್ ಮಾಡಿಸಿ, ಆರೋಪಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.