ಅಂಗನವಾಡಿ ಕೇಂದ್ರವನ್ನು ಉದ್ಘಾಟಿಸಿದ ಶಾಸಕ ಕಾಮತ್
Sunday, September 28, 2025
ಮಂಗಳೂರು: ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜೆಪ್ಪುವಿನ ಭಾರತ್ ಮೈದಾನದಲ್ಲಿ ನೂತನವಾಗಿ ಸುಮಾರು 7 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಅಂಗನವಾಡಿ ಕೇಂದ್ರದ ಉದ್ಘಾಟನೆಯನ್ನು ಶಾಸಕ ವೇದವ್ಯಾಸ ಕಾಮತ್ ಅವರು ನೆರವೇರಿಸಿದರು.
ಬಳಿಕ ಅವರು ಮಾತನಾಡಿ, ಮಂಗಳೂರು ಮಹಾನಗರ ಪಾಲಿಕೆಯ ಹಿಂದಿನ ಬಿಜೆಪಿ ಆಡಳಿತದ ಅವಧಿಯಲ್ಲಿ ಸ್ಥಳೀಯ ಪಾಲಿಕೆ ಸದಸ್ಯ ಪ್ರೇಮಾನಂದ ಶೆಟ್ಟಿಯವರ ಕ್ಷೇತ್ರಾಭಿವೃದ್ಧಿ ಅನುದಾನದಲ್ಲಿ ಈ ಕಾಮಗಾರಿಯ ಶಿಲನ್ಯಾಸ ನೆರವೇರಿಸಲಾಗಿತ್ತು. ಇದೀಗ ಕಟ್ಟಡವು ಲೋಕಾರ್ಪಣೆಗೊಳ್ಳುತ್ತಿದ್ದು ಈ ನಿಟ್ಟಿನಲ್ಲಿ ನಿರಂತರವಾಗಿ ಶ್ರಮಿಸಿದ ಪ್ರೇಮಾನಂದ ಶೆಟ್ಟಿಯವರಿಗೆ ವಿಶೇಷ ಅಭಿನಂದನೆಗಳು. ಮುಂದಿನ ದಿನಗಳಲ್ಲಿ ಮಕ್ಕಳ ಬಾಲ್ಯದ ಶಿಕ್ಷಣಕ್ಕಾಗಿ ಕ್ಷೇತ್ರದಲ್ಲಿ ಅಗತ್ಯವಿರುವೆಡೆ ಬೇಡಿಕೆಗನುಸಾರವಾಗಿ ಹೆಚ್ಚಿನ ಅಂಗನವಾಡಿ ಕೇಂದ್ರಗಳನ್ನು ತೆರೆಯಲು ವಿಶೇಷ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಸದ ಕ್ಯಾ. ಬ್ರಿಜೇಶ್ ಚೌಟ, ಬಿಜೆಪಿ ಪ್ರಮುಖರಾದ ಪ್ರೇಮಾನಂದ ಶೆಟ್ಟಿ, ಭಾನುಮತಿ, ದೀಪಕ್ ಪೈ, ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಾದ ರೇಷ್ಮಾ, ಅಂಗನವಾಡಿ ಕಾರ್ಯಕರ್ತೆ ರೇಖಾ, ಅಂಬಾ ಮಹೇಶ್ವರಿ ಟ್ರಸ್ಟ್ನ ಅಧ್ಯಕ್ಷರಾದ ಸೀತಾರಾಮ್, ಪ್ರಕಾಶ್, ಯಶವಂತ್, ರಾಜೇಂದ್ರ, ನವೀನ್ ಕಿಲ್ಲೆ ಮತ್ತಿತರರು ಉಪಸ್ಥಿತರಿದ್ದರು.
