ಇಂದು ಕರಾವಳಿಯಲ್ಲಿ ಸಾದಾರಣ ಮಳೆ ಸಾಧ್ಯತೆ
ಮಂಗಳೂರು: ಕರಾವಳಿಯಲ್ಲಿ ಗುರುವಾರ ಹೆಚ್ಚಿನ ಸಮಯ ಮೋಡಕವಿದ ವಾತಾವರಣ ಕಂಡುಬಂದಿತ್ತು, ಹಲವಡೆ ಅಲ್ಪ ಮಳೆಯಾಗಿದೆ. ಕೆಲವು ದಿನಗಳಿಂದ ಮಳೆ ದೂರವಾಗಿದ್ದು, ಈಗ ಮತ್ತೆ ಎಲ್ಲೆಡೆ ಮಳೆಯ ವಾತಾವರಣ ಕಂಡುಬಂದಿದೆ. ಶುಕ್ರವಾರ ಜಿಲ್ಲೆಯ ಹಲವೆಡೆ ಮಳೆಯ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ದ.ಕ. ಜಿಲ್ಲೆಯಲ್ಲಿ ಗುರುವಾರ ನಸುಕಿನ ಜಾವದಿಂದಲೇ ಜಿಟಿಜಿಟಿ ಮಳೆ ಕಾಣಿಸಿತ್ತು. ಬೆಳಗ್ಗೆ ಸ್ವಲ್ಪ ಹೊತ್ತು ಮಳೆಗೆ ಬಿಡುವು ಹೊರತುಪಡಿಸಿದರೆ ಇಡೀ ಮೋಡ ಆವರಿಸಿತ್ತು. ಗ್ರಾಮಾಂತರ ಪ್ರದೇಶದಲ್ಲಿ ಅಷ್ಟಾಗಿ ನಿರಂತರ ಮಳೆಯಾಗದಿದ್ದರೂ ಮಂಗಳೂರಿನಲ್ಲಿ ಸಂಜೆ ವರೆಗೆ ಜಿಟಿಜಿಟಿ ಮಳೆ ಸುರಿದಿದೆ. ದ.ಕ ಜಿಲ್ಲೆಯಲ್ಲಿ ಗುರುವಾರ ಬೆಳಗ್ಗಿನ ಮಾಹಿತಿಯಂತೆ ಕಳೆದ 24 ಗಂಟೆಗಳಲ್ಲಿ 3.1ಮಿಮಿ ಮಳೆ ದಾಖಲಾಗಿತು.
ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಅಲ್ಲಲ್ಲಿ ಬಿಟ್ಟು ಬಿಟ್ಟು ದಿನದಲ್ಲಿ 2, 3 ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಕರಾವಳಿ ತೀರ ಭಾಗಗಳಲ್ಲಿ ಸ್ವಲ್ಪ ಜಾಸ್ತಿ ಇರಲಿದೆ. ಬಂಗಾಳಕೊಲ್ಲಿಯ ಒಡಿಸ್ಸಾ ಕರಾವಳಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಗಾಳಿ ಚಲಿಸುವ ಪಥದ ನಿಖರತೆ ಇನ್ನೂ ಸ್ಪಷ್ಟವಾಗಿಲ್ಲ. ಇದರ ಪರಿಣಾಮದಿಂದ ಮಳೆ ಸ್ವಲ್ಪ ಚುರುಕಾಗಿದ್ದು, ರಾಜ್ಯದಲ್ಲಿ ಒಂದು ವಾರದ ಕಾಲ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.