
ಬಂಗ್ಲೆಗುಡ್ಡೆ ರಹಸ್ಯ ಭೇದಿಸಿದ ಎಸ್‌ಐಟಿ: ಐದು ಸ್ಥಳಗಳಲ್ಲಿ ಮಾನವ ಆಸ್ಥಿಪಂಜರದ ಅವಶೇಷಗಳು ಪತ್ತೆ
ನಾಳೆ ನ್ಯಾಯಾಲಯಕ್ಕೆ ವರದಿ..
ಬಂಗ್ಲೆಗುಡ್ಡೆ ತಲೆಬುರುಡೆ ರಹಸ್ಯದ ಬಗ್ಗೆ ಹೈಕೋರ್ಟ್ ರಿಟ್ ಅರ್ಜಿಯಲ್ಲಿ ಸೌಜನ್ಯ ಮಾವ ವಿಠಲ ಗೌಡನ ಸಹೋದರ ಪುರಂದರ ಗೌಡ ಉಲ್ಲೇಖಿಸಿದ ಹಿನ್ನೆಲೆಯಲ್ಲಿ ಎಸ್‌ಐಟಿ ತಂಡ ತರಾತುರಿಯಲ್ಲಿ ಒಂದೇ ದಿನದಲ್ಲಿ ಬಂಗ್ಲೆಗುಡ್ಡೆ ಕಾಡಿನಲ್ಲಿ ಅಸ್ಥಿಪಂಜರ ಅವಶೇಷಗಳ ಮಹಜರು ಪ್ರಕ್ರಿಯೆ ನಡೆಸಿದೆ.
ಬಂಗ್ಲೆಗುಡ್ಡೆ ತಲೆಬುರುಡೆ ರಹಸ್ಯ ಪತ್ತೆಗೆ ಇನ್ನೂ ಯಾವುದೇ ನಿರ್ದಿಷ್ಟ ಕ್ರಮ ಕೈಗೊಂಡಿಲ್ಲ ಎಂದು ಈ ಹಿಂದೆ ಪುರಂದರ ಗೌಡ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಎಸ್‌ಐಟಿಗೆ ನೊಟೀಸ್ ಜಾರಿಗೊಳಿಸಿತ್ತು. ಹೈಕೋರ್ಟ್ ನೋಟಿಸ್ ಬೆನ್ನಲ್ಲೇ ಎಸ್‌ಐಟಿ ಬಂಗ್ಲೆಗುಡ್ಡೆ ಅಸ್ಥಿಪಂಜರ ಶೋಧಕ್ಕಿಳಿದಿದೆ. ಸೆ.18 ರಂದು ಹೈಕೋರ್ಟ್‌ಗೆ ವರದಿ ಸಲ್ಲಿಸಬೇಕಾದ ಹಿನ್ನೆಲೆಯಲ್ಲಿ ಬಂಗ್ಲೆಗುಡ್ಡೆ ಅಸ್ಥಿಪಂಜರ ಶೋಧ ಕಾರ್ಯಾಚರಣೆಯನ್ನು ಬಿಗಿಗೊಳಿಸಲಾಗಿತ್ತು.
ಹೈಕೋರ್ಟ್‌ಗೆ ಪುರಂದರ ಗೌಡ ಸಲ್ಲಿಸಿದ ರಿಟ್ ಅರ್ಜಿಯಲ್ಲಿ ಬಂಗ್ಲೆಗುಡ್ಡೆ ರಹಸ್ಯದ ಬಗ್ಗೆ ಹಲವು ವಿಚಾರಗಳನ್ನು ಉಲ್ಲೇಖಿಸಲಾಗಿತ್ತು.
ಹೊಸ ದಿಕ್ಕು ನೀಡಿದ ‘ಬಂಗ್ಲೆಗುಡ್ಡೆ’..
iನವ ಅಸ್ಥಿಪಂಜರಗಳನ್ನು ಪತ್ತೆಯಾಗಿರುವುದು ಒಟ್ಟು ಪ್ರಕರಣದ ತನಿಖೆಗೆಎ ಹೊಸ ದಿಕ್ಕು ನೀಡಲಿದೆ ಎಂದು ವ್ಯಾಖ್ಯಾನಿಸಲಾಗಿದೆ.
ಪ್ರಕರಣದಲ್ಲಿ ಇಲ್ಲಿಯ ತನಕ ಸಾಕಷ್ಟು ಊಹಾಪೋಹಗಳಿದ್ದರೂ ಇಂದು ಐದು ಸ್ಥಳಗಳಲ್ಲಿ ಮಾನವ ಆಸ್ಥಿಪಂಜರದ ಅವಶೇಷಗಳು ದೊರೆತಿರುವುದು ತನಿಖೆಯ ದಿಸೆಯನ್ನೇ ಬದಲಾಯಿಸಿದೆ ಮಾತ್ರವಲ್ಲ ಎಸ್‌ಐಟಿಗೆ ಸ್ಥಳೀಯರು, ಸಾಕ್ಷಿದಾರರು ನೆರವಿಗೆ ಮುಂದಾಗಿದ್ದಾರೆ. ಸಾಕ್ಷಿಗಳನ್ನು ಎಸ್‌ಐಟಿ ಒಪ್ಪಿಕೊಂಡಿದ್ದರೂ ಇನ್ನೂ ಯಾವುದೇ ನಿರ್ದಿಷ್ಟ ಕ್ರಮ ಕೈಗೊಂಡಿಲ್ಲ.
ಶವ ಹೂತಿರುವುದಕ್ಕೆ ಈಗ ಭೌತಿಕ ಸಾಕ್ಷಿ ದೊರೆತಿರುವುದರಿಂದ ಇತರ ಎಲ್ಲ ಸಾಧ್ಯ ಸ್ಥಳಗಳನ್ನು ತನಿಖೆ ಮಾಡಿ. ಅಲ್ಲಿರುವ ಸಾಕ್ಷಿ ಹಾನಿಯಾಗದಂತೆ ಅಥವಾ ಬದಲಾವಣೆಗೆ ಒಳಗಾಗದಂತೆ ಕಾಯ್ದುಕೊಳ್ಳುವುದು ಅತಿ ಮುಖ್ಯ ಕರ್ತವ್ಯವಾಗಿದೆ. ಗೌರವಾನ್ವಿತ ನ್ಯಾಯಾಲಯದಿಂದ ಬರುವ ನಿರ್ದೇಶನ ತನಿಖೆಯನ್ನು ಬಾಹ್ಯ ಒತ್ತಡಗಳಿಂದ ಮುಕ್ತಗೊಳಿಸಬೇಕು. ಎಸ್‌ಐಟಿಗೆ ಸ್ಪಷ್ಟ ಹಾಗೂ ನಿಷ್ಕಳಂಕ ಅಧಿಕಾರವನ್ನು ನೀಡಿ, ಇದರಿಂದಾಗಿ ಎಲ್ಲ ನಂಬಲರ್ಹ ಸುಳಿವುಗಳನ್ನು ತಾರ್ಕಿಕ ಅಂತ್ಯಕ್ಕೆ ತಲುಪಿಸಲು ನೆರವಾಗುತ್ತದೆ ಎಂದು ಪುರಂದರ ಗೌಡ ಹೈಕೋರ್ಟ್‌ಗೆ ಸಲ್ಲಿಸಿದ ರಿಟ್ ಅರ್ಜಿಯಲ್ಲಿ ಉಲ್ಲೇಖಿಸಿದ್ದರು.
ಮತ್ತೆ ನೊಟೀಸ್..
ಎಸ್‌ಐಟಿ ತನಿಖೆ ಸಂದರ್ಭದಲ್ಲಿ ವಶಕ್ಕೆ ತೆಗೆದುಕೊಳ್ಳಲಾದ ಮೊಬೈಲ್‌ಗಳನ್ನು ರಿಟ್ರೀವ್ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಬಂಧನದಲ್ಲಿರುವ ಆರೋಪಿ ಚೆನ್ನಯ್ಯನ ಸಂಪರ್ಕದಲ್ಲಿ ಇರುವವರ ವಿಚಾರಣೆ ಇನ್ನೂ ಮುಗಿದಿಲ್ಲ. ಯಾವುದೇ ಕ್ಷಣದಲ್ಲಿ ಕರೆದರೂ ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ಸೂಚನೆ ನೀಡಿದೆ. ಈಗಾಗಲೇ ಹಲವು ಮೊಬೈಲ್‌ಗಳನ್ನು ವಶಕ್ಕೆ ಪಡೆದು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಎಸ್‌ಐಟಿ ಕಳುಹಿಸಿದೆ. ಮೊಬೈಲ್ ಡಾಟಾ ರಿಟ್ರೀವ್ ಆದ ಬಳಿಕ ಎಲ್ಲರಿಗೂ ಮತ್ತೆ ನೊಟೀಸ್ ನೀಡುವ ಸಾಧ್ಯತೆ ಇದೆ.