ಮತ್ತೆ ಮುನ್ನಲೆಗೆ ಬಂದ ಸೌಜನ್ಯ ಹತ್ಯೆ ಪ್ರಕರಣ: ಮೂವರನ್ನು ಎಸ್‌ಐಟಿಗೆ ಬುಲಾವ್
ಮಂಗಳೂರು: ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಹತ್ಯೆ ಪ್ರಕರಣದಲ್ಲಿ ಆರೋಪ ಹೊತ್ತಿದ್ದ ಮೂವರಿಗೆ ಬುರುಡೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ(ಎಸ್‌ಐಟಿ) ವಿಚಾರಣೆಗೆ ಹಾಜರಾಗುವಂತೆ ಬುಲಾವ್ ಮಾಡಿದೆ.
ಸೌಜನ್ಯ ಹತ್ಯೆ ಪ್ರಕರಣದಲ್ಲಿ ಆರೋಪಮುಕ್ತಗೊಂಡಿದ್ದ ಉದಯ್ ಜೈನ್, ಧೀರಜ್ ಕೆಲ್ಲಾ ಹಾಗೂ ಮಲ್ಲಿಕ್ ಜೈನ್‌ಗೆ ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ಸೂಚನೆ ನೀಡಿದೆ.
ಸೌಜನ್ಯ ಕೊಲೆ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಈ ಮೂವರ ವಿರುದ್ಧ ಆರೋಪ ಹೊರಿಸಲಾಗಿತ್ತು. ಈ ಮೂವರು ಸೌಜನ್ಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದಾಗಿ ಸೌಜನ್ಯ ಕುಟುಂಬ ಆರೋಪಿಸಿತ್ತು. ಇದರ ಬಗ್ಗೆ ಸಿಐಡಿ ತನಿಖೆ ನಡೆದು, ಬಳಿಕ ಸಿಬಿಐ ತನಿಖೆಯಲ್ಲೂ ಈ ಮೂವರ ವಿರುದ್ಧ ಆರೋಪ ಸಾಬೀತಾಗಿಲ್ಲ. ಈ ಮೂವರೂ ಬ್ರೈನ್ ಮ್ಯಾಪಿಂಗ್‌ಗೆ ಒಳಗಾಗಿದ್ದರು.
ಇದೀಗ ಸೌಜನ್ಯ ಕೇಸ್ ಬಗ್ಗೆ ಎಸ್‌ಐಟಿಗೆ ಪ್ರತ್ಯಕ್ಷದರ್ಶಿ ಎಂದು ಹೇಳುತ್ತಿರುವ ಮಂಡ್ಯದ ಮಹಿಳೆಯೊಬ್ಬರು ದೂರು ನೀಡಿದ್ದರು. ಅಲ್ಲದೆ ಬುರುಡೆ ಕೇಸಿನ ಆರೋಪಿ ಚಿನ್ನಯ್ಯ ಕೂಡ ಈ ಹಿಂದೆ ಸೌಜನ್ಯ ಕೇಸಿನಲ್ಲಿ ಆಕೆಯ ಶವ ವಿಲೇವಾರಿ ಮಾಡಿದ ಬಗ್ಗೆ ನನಗೆ ಗೊತ್ತಿದೆ ಎಂದು ಹೇಳಿಕೊಂಡಿದ್ದ. ಅಲ್ಲದೆ ಸೌಜನ್ಯ ಪರ ಹೋರಾಟಗಾರರಾದ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಗಿರೀಶ್ ಮಟ್ಟಣ್ಣವರ್ ಕೂಡ ಅನಾಥ ಶವಗಳ ಹೂತ ಬಗ್ಗೆ ಪಂಚಾಯ್ತಿ ದಾಖಲೆಗಳು ಸರಿಯಿಲ್ಲ, ಮತ್ತೆ ಸೌಜನ್ಯ ಕೇಸಿನ ಮರು ತನಿಖೆ ನಡೆಸುವಂತೆ ಕೋರಿ ಎಸ್‌ಐಟಿ ಕಚೇರಿಗೆ ದೂರು ನೀಡಿದ್ದರು. ಸೌಜನ್ಯ ತಾಯಿ ಕುಸುಮಾವತಿ ಕೂಡ ಇತ್ತೀಚೆಗೆ ಎಸ್‌ಐಟಿ ಕಚೇರಿಗೆ ತೆರಳಿ ಚಿನ್ನಯ್ಯನ ತನಿಖೆ ನಡೆಸುವಂತೆ ಕೋರಿ ದೂರು ನೀಡಿದ್ದರು. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಎಸ್‌ಐಟಿ ಅಧಿಕಾರಿಗಳು ಮಂಗಳವಾರ ಈ ಮೂರು ಮಂದಿಗೆ ನೋಟಿಸ್ ನೀಡಿ, ಬುಧವಾರ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು.
ಅದರಂತೆ ಉದಯ್ ಜೈನ್ ಅವರು ಬುಧವಾರ ಬೆಳಗ್ಗೆ ಎಸ್‌ಐಟಿ ಕಚೇರಿಗೆ ಆಗಮಿಸಿದ್ದು ಸಂಜೆ ವರೆಗೂ ಕಚೇರಿಯಲ್ಲಿ ತನಿಖಾಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.
ಯಾವುದೇ ತನಿಖೆಗೆ ಸಿದ್ಧ:
ಯಾವುದೇ ರೀತಿಯ ತನಿಖೆಗೆ ನಾವು ಸಿದ್ಧರಿದ್ದೇವೆ, ಸೌಜನ್ಯ ತಾಯಿ ಎಸ್‌ಐಟಿಗೆ ಕೊಟ್ಟ ದೂರಿಗೆ ವಿಚಾರಣೆಗೆ ಕರೆದಿರಬಹುದು. ಚಿನ್ನಯ್ಯ ನೀಡಿದ ಹೇಳಿಕೆಯ ಕಾರಣಕ್ಕೂ ಕರೆದಿರಬಹುದು, ಬುರುಡೆ ಪ್ರಕರಣದ ದಿಕ್ಕು ಬದಲಿಸುವ ಹುನ್ನಾರ ಇದು ಎಂದು ಉದಯ ಜೈನ್ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.
ಮಂಗಳವಾರ ರಾತ್ರಿ ಎಸ್‌ಐಟಿ ಕರೆ ಮಾಡಿ ಬುಧವಾರ ಬರುವಂತೆ ಹೇಳಿದರು. ನಾನು ಯಾವುದೇ ವಿಚಾರಣೆಗೆ ಸಿದ್ಧನಿದ್ದೇನೆ. ಇನ್ನೊಮ್ಮೆ ನನ್ನ ಬ್ರೈನ್ ಮ್ಯಾಪಿಂಗ್ ಮಾಡಿದರೂ ಸಿದ್ದನಿದ್ದೇನೆ. ಆವತ್ತು ಸಿಐಡಿ, ಸಿಬಿಐ ಎಲ್ಲವೂ ನಮ್ಮನ್ನು ಆರೋಪ ಮುಕ್ತ ಮಾಡಿದೆ. ಸಿಬಿಐ ಕೋರ್ಟ್ ಎದುರು ನಾವೇ ಬ್ರೈನ್ ಮ್ಯಾಪಿಂಗ್ ನಡೆಸುವಂತೆ ಹೇಳಿದ್ದೆವು. ಕೋರ್ಟ್ ಅನುಮತಿ ಕೊಟ್ಟ ಬಳಿಕ ಬ್ರೈನ್ ಮ್ಯಾಪಿಂಗ್ ಆಗಿದೆ. ಚೆನ್ನೈ ಸಿಬಿಐ ಕಚೇರಿಯಲ್ಲಿ ವಿಚಾರಣೆ ನಡೆದು ಬೆಂಗಳೂರಿನಲ್ಲಿ ಬ್ರೈನ್ ಮ್ಯಾಪಿಂಗ್ ನಡೆಸಲಾಗಿದೆ. ಎಲ್ಲದರಲ್ಲೂ ನಮ್ಮ ಯಾವುದೇ ತಪ್ಪಿಲ್ಲ ಎಂದು ಬಂದಿದೆ. ಮುಂದೆಯೂ ಯಾವುದೇ ವಿಚಾರಣೆಗೆ ನಾವು ಸಿದ್ದರಿದ್ದೇವೆ ಎಂದಿದ್ದಾರೆ.
ಪಂಚನಾಮೆಗೆ ಸರ್ಕಾರಿ ಅಧಿಕಾರಿಗಳ ಬಳಕೆ:
ಬುರುಡೆ ಪ್ರಕರಣದ ಆರೋಪಿ ಚಿನ್ನಯ್ಯ ವಿಚಾರಣೆ ವೇಳೆ ಹಲವು ಸಂಗತಿಗಳನ್ನು ಬಾಯಿಬಿಟ್ಟಿದ್ದಾನೆ ಎಂದು ಹೇಳಲಾಗಿದೆ.
ಪ್ರತಿಯೊಂದು ಮಹಜರಿಗೂ ಸರ್ಕಾರಿ ಅಧಿಕಾರಿಗಳನ್ನು ಪಂಚನಾಮೆಗೆ ಬಳಕೆ ಮಾಲಾಗಿದೆ. ಬೆಳ್ತಂಗಡಿ ತಾಲೂಕಿನ ಗ್ರಾಮ ಪಂಚಾಯತ್ ಕಾರ್ಯದರ್ಶಿಗಳನ್ನು ಎಸ್‌ಐಟಿ ಬಳಸಿಕೊಳ್ಳುತ್ತಿದೆ. ಕೋರ್ಟ್‌ನಲ್ಲಿ ಪ್ರತಿಯೊಂದು ಸಾಕ್ಷಿ ರಕ್ಷಣೆಗೆ ಎಸ್‌ಐಟಿ ಮುಂದಾಗಿದೆ. ಸಾರ್ವಜನಿಕನ್ನು ಬಳಕೆ ಮಾಡಿದರೆ ಕೋರ್ಟ್‌ನಲ್ಲಿ ಸಾಕ್ಷಿಗೆ ಬೆದರಿಕೆ ಹಾಕಿ ಉಲ್ಟಾ ಹೊಡೆಯುವ ಸಾಧ್ಯತೆ ಇರುತ್ತದೆ. ಹಾಗಾಗಿ ನಟ ದರ್ಶನ್ ಪ್ರಕರಣದಲ್ಲಿ ಕೂಡ ಪೊಲೀಸರು ಸರ್ಕಾರಿ ಅಧಿಕಾರಿಗಳನ್ನು ಬಳಸಿದ್ದರು.