ಒಳ ಮೀಸಲಾತಿ ಸಮೀಕ್ಷೆ ಸರಿಯಾಗಿಲ್ಲ: ದಲಿತ ಕುಂದುಕೊರತೆ ಸಭೆಯಲ್ಲಿ ಆಕ್ಷೇಪ

ಒಳ ಮೀಸಲಾತಿ ಸಮೀಕ್ಷೆ ಸರಿಯಾಗಿಲ್ಲ: ದಲಿತ ಕುಂದುಕೊರತೆ ಸಭೆಯಲ್ಲಿ ಆಕ್ಷೇಪ


ಮಂಗಳೂರು: ಪರಿಶಿಷ್ಟಜಾತಿಗಳ ಒಳ ಮೀಸಲಾತಿ ಸಮೀಕ್ಷೆ ಸರಿಯಾಗಿ ನಡೆದಿಲ್ಲ. 2.50 ಲಕ್ಷದಷ್ಟಿರುವ ಆದಿದ್ರಾವಿಡ ಸಮುದಾಯದವರು ಜಾತಿ ಕಾಲಂನಲ್ಲಿ ‘ಗೊತ್ತಿಲ್ಲ’ ಎಂಬುದಾಗಿ ಕಳೆದ ಸಮೀಕ್ಷೆಯಲ್ಲಿ ನಮೂದಿಸಿದ ಕಾರಣ ಜಾತಿ ಸಮೀಕ್ಷೆಯಿಂದ ಹೊರಬಿದ್ದಿದ್ದಾರೆ. ಒಳ ಮೀಸಲಾತಿ ಎಂಬುದು ಸಂವಿಧಾನದಲ್ಲಿಯೇ ಇಲ್ಲ ಎಂಬ ಆಕ್ಷೇಪ ದಲಿತ ಮುಖಂಡರಿಂದ ವ್ಯಕ್ತವಾಗಿದೆ.

ತಹಶೀಲ್ದಾರ್ ಅನುಪಸ್ಥಿತಿಯಲ್ಲಿ ಮಂಗಳೂರು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಮಹೇಶ್ ಹೊಳ್ಳ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಮಂಗಳೂರು ತಾಲೂಕು ಮಟ್ಟದ ಪರಿಶಿಷ್ಟಜಾತಿ, ವರ್ಗಗಳ ಕುಂದು ಕೊರತೆ ಸಭೆಯಲ್ಲಿ ದಲಿತ ನಾಯಕರಿಂದ ಒಳ ಮೀಸಲಾತಿ ಬಗ್ಗೆ ಅಸಮಾಧಾನ ವ್ಯಕ್ತವಾಯಿತು.

ದಲಿತ ಮುಖಂಡ ಶೀನ ಎಂಬವರು ಮಾತನಾಡಿ, ಒಳ ಮೀಸಲಾತಿ ವಯವಸ್ಥೆ ಸಂವಿಧಾನದಲ್ಲಿ ಇಲ್ಲವಾಗಿದ್ದರೂ 2005ರಲ್ಲಿ ಎ.ಜೆ ಸದಾಶಿವ ಆಯೋಗದ ಸಮೀಕ್ಷೆ ಮಾಡಿ ವರದಿ ಸಲ್ಲಿಸಿದ್ದು. ಅದನ್ನು ಅಂದಿನ ಮುಖ್ಯಮಂತ್ರಿ ಸದಾನಂದ ಗೌಡ ವೈಜ್ಞಾನಿಕವಾಗಿಲ್ಲ ಎಂಬ ಕಾರಣಕ್ಕೆ ಬದಿಗೊತ್ತಿದ್ದರು. ಬಳಿಕ 2013ರಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರೂ ಆ ವರದಿಯನ್ನು ಗಣನೆಗೆ ತೆಗೆದುಕೊಂಡಿರಲಿಲ್ಲ. 2019ರಲ್ಲಿ ಕುಮಾರಸ್ವಾಮಿಯವರೂ ಅದನ್ನು ಪರಿಗಣಿಸಿರಲಿಲ್ಲ. ಇದೀಗ ಸುಪ್ರೀಂ ಕೋರ್ಚ್ ಒಳ ಮೀಸಲಾತಿ ತರಬಹುದು ಎಂದು  ಆದೇಶ ನೀಡಿರುವುದರಿಂದ ತರಾತುರಿಯಲ್ಲಿ ಮಾಡಲಾದ ಸಮೀಕ್ಷೆ ಅಪೂರ್ಣವಾಗಿದೆ. ೧೯೫೦ರಲ್ಲಿ ರಾಷ್ಟ್ರಪತಿಗಳಿಂದ ಅಂಕಿತಗೊಂಡ ಪಟ್ಟಿಯನ್ನು ಬದಲಾಯಿಸುವ ಅಧಿಕಾರ ರಾಜ್ಯ  ಸರಕಾರಕ್ಕೆ ಇಲ್ಲ. ಈ ಬಗ್ಗೆ ಕಾನೂನು ರೀತಿಯಲ್ಲಿ ನಾವು ಹೋರಾಟ ಮಾಡುತ್ತೇವೆ ಎಂದು ಹೇಳಿದರು.

ಕೃಷ್ಣಪ್ಪ ಕೊಂಚಾಡಿಯವರೂ ಒಳ ಮೀಸಲಾತಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ಗೊಂದಲಗಳಿಂದ ಕೂಡಿರುವ, ಹಲವಾರು ನ್ಯೂನ್ಯತೆಗಳಿರುವ ಪ್ರಸಕ್ತ ವರದಿಯನ್ನು ಒಪ್ಪಲು ಸಾಧ್ಯವಿಲ್ಲ ಎಂದರು.

ಸಭೆಯಲ್ಲಿ ವ್ಯಕ್ತವಾದ ಆಕ್ಷೇಪದ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತರುವುದಾಗಿ ಮಹೇಶ್ ಹೊಳ್ಳ ತಿಳಿಸಿದರು.

ಆಸ್ಪತ್ರೆಗಳ ನಿರ್ಲಕ್ಷ್ಯದಿಂದ ಸಾವು ಆರೋಪ:

ಆ. 29ರಂದು ಮೂಡಬಿದ್ರೆಯಲ್ಲಿ ವ್ಯಕ್ತಿಯೊಬ್ಬರು ಅಪಘಾತಕ್ಕೀಡಾದಾಗ ಅಲ್ಲಿನ ಆಳ್ವಾಸ್ ಆಸ್ಪತ್ರೆಯಿಂದ ಐಸಿಯುನಲ್ಲಿ ಚಿಕಿತ್ಸೆಗಾಗಿ ರೋಗಿಯನ್ನು ವೆನ್‌ಲಾಕ್‌ಗೆ ಸ್ಥಳಾಂತರಿಸಲಾಯಿತು. ಆದರೆ ಅಲ್ಲಿಯೂ ಐಸಿಯು ಇಲ್ಲದೆ ಕುಂಟಿಕಾನದ ಖಾಸಗಿ ಆಸ್ಪತ್ರೆಗೆ ಕಳುಹಿಸಲಾಯಿತು. ಅಲ್ಲಿಂದ ಮತ್ತೆ ಮೂಡಬಿದ್ರೆಗೆ ಕಳುಹಿಸುವ ಹೊತ್ತಿಗೆ ಅಪಘಾತಕ್ಕೀಡಾದ ವ್ಯಕ್ತಿ ಸಾವಿಗೀಡಾಗಿದ್ದಾರೆ. ಜಿಲ್ಲಾ ಆಸ್ಪತ್ರೆಯಾದ ವೆನ್‌ಲಾಕ್‌ನಲ್ಲಿ ಚಿಕಿತ್ಸೆ ದೊರೆಯುತ್ತಿದ್ದರೆ ರೋಗಿಯನ್ನು ಬದುಕಿಸಬಹುದಿತ್ತು ಎಂದು ಆರೋಪಿಸಿದರು.

ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಹಾಗೂ ವೆನ್‌ಲಾಕ್ ಆಸ್ಪತ್ರೆಯಲ್ಲಿ ಐಸಿಯು ವ್ಯವಸ್ಥೆಯನ್ನು ಹೆಚ್ಚಿಸಬೇಕು ಎಂದು ಅವರು ಆಗ್ರಹಿಸಿದರು.

ಸಭೆಯಲ್ಲಿದ್ದ ಇನ್ನೋರ್ವ ದಲಿತ ಮುಖಂಡ ಈ ಸಂದರ್ಭ ಮಾತನಾಡಿ, ಈ ರೀತಿ ತುರ್ತು ಚಿಕಿತ್ಸೆಗೆ ದಲಿತರು ಸೇರಿದಂತೆ ಜನಸಾಮಾನ್ಯರು ಜಿಲ್ಲಾಸ್ಪತ್ರೆ ವೆನ್‌ಲಾಕ್‌ಗೆ ತೆರಳಿದಾಗ ಐಸಿಯು ಇಲ್ಲ ಎಂಬ ಉತ್ತರ ಬರುತ್ತದೆ ಎಂದು ಆರೋಪಿಸಿದರು. ಈ ಬಗ್ಗೆ ಪರಿಶೀಲಿಸುವಂತೆ ತಾಲೂಕು ವೈದ್ಯಾಧಿಕಾರಿಗೆ ತಾಪಂ ಇಒ ಸೂಚಿಸಿದರು.

ಗಂಜಿಮಠ ಅಂಬೇಡ್ಕರ್ ಭವನದ ಸಮಸ್ಯೆ ಮುಂದಿನ ಸಭೆಯೊಳಗೆ ಪರಿಹಾರ:

ಗಂಜಿಮಠದ ಅಂಬೇಡ್ಕರ್ ಭವನದ ಸಮಸ್ಯೆಗಳ ಬಗ್ಗೆ ಕಳೆದ ಹಲವು  ವರ್ಷಗಳಿಂದ ಸಮಸ್ಯೆಗಳನ್ನು ಹೇಳುತ್ತಿದ್ದರೂ ಗಮನ ಹರಿಸಲಾಗುತ್ತಿಲ್ಲ. ಆಸನದ ವ್ಯವಸ್ಥೆ ಇಲ್ಲದೆ ನೆಲದಲ್ಲಿ ಕುಳಿತು ಕಾರ್ಯಕ್ರಮ ಮಾಡಬೇಕಾದ ಪರಿಸ್ಥಿತಿ ಇದೆ. ಸುಮಾರು ಐದು ಲಕ್ಷ ರೂ. ಅವ್ಯವಹಾರ ಆಗಿದ್ದು ಈ ಬಗ್ಗೆ ತನಿಖೆ ಆಗಬೇಕು ಎಂದು ಎಸ್.ಪಿ. ಆನಂದ ಆಗ್ರಹಿ ಸಿದರು.

ನಾನು ಈಗಾಗಲೇ ಅಲ್ಲಿನ ನೀರಿನ ವ್ಯವಸ್ಥೆಗಾಗಿಟ್ಯಾಂಕ್, ಶೌಚಾಲಯದುರಸ್ತಿ, ಆವರಣಗೋಡೆ ವ್ಯವಸ್ಥೆ ಮಾಡಿಸಿದ್ದೇನೆ. ಉಳಿದ ಮೂಲಭೂತ ಸೌರ್ಕಯಗಳನ್ನು ಮುಂದಿನ  ಸಭೆಯೊಳಗೆ ವ್ಯವಸ್ಥೆ ಮಾಡುವುದಾಗಿ ತಾಪಂ ಇಒ ಮಹೇಶ್ ಹೊಳ್ಳ ಭರವಸೆ ನೀಡಿದರು.

ಸಭೆಯಲ್ಲಿ ರಮೇಶ್ ಕೋಟ್ಯಾನ್, ರಮೇಶ್, ಚಂದ್ರಕುಮಾರ್ ಹಾಗೂ ಇನ್ನಿತರರು ವಿವಿಧ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಗಮನ ಸೆಳೆದರು. ಸಮಾಜ ಕಲ್ಯಾಣ ಅಧಿಕಾರಿ ಸುರೇಶ್ ಅಡಿಗ, ಗ್ರೇಡ್ 2 ತಹಶೀಲ್ದಾರ್ ಚೌಧರಿ ಮೊದಲಾದವರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article