
ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ-ಬಿಜೆಪಿಗರಿಗೆ ಮಾಹಿತಿ ಕೊರತೆ: ವಿನಯ ರಾಜ್
ಮಂಗಳೂರು: ಹಿಂದುಳಿದ ವರ್ಗಗ ಆಯೋಗದಿಂದ ನಡೆಸಲು ಯೋಜಿಸಲಾಗಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಬಗ್ಗೆ ಬಿಜೆಪಿ ಜನಪ್ರತಿನಿಧಿಗಳು ಹಾಗೂ ನಾಯಕರಲ್ಲಿ ಮಾಹಿತಿ ಕೊರತೆ ಇದೆ. ಇದರಿಂದ ಜನರ ನಡುವೆ ಅವರು ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ವಿನಯ ರಾಜ್ ಆರೋಪಿಸಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಮೀಕ್ಷೆಯ ಪೂರ್ವಭಾವಿಯಾಗಿ ಮನೆಗಳಿಗೆ ಸ್ಟಿಕ್ಕರ್ ಅಂಟಿಸಿರುವುದನ್ನೇ ಸಮೀಕ್ಷೆ ಎಂಬುದಾಗಿ ಬಿಜೆಪಿಯ ಜನಪ್ರತಿನಿಧಿಗಳು ಜನರ ನಡುವೆ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದರು.
ಹಿಂದುಳಿದ ವರ್ಗಗಳು ಹಾಗೂ ಸಮುದಾಯಗಳ ನಾಯಕರನ್ನು ಕರೆಸಿ ಸಮೀಕ್ಷೆ ಬಗೆಗಿನ ಸಂಶಯ ನಿವಾರಣೆಗಾಗಿ ಬುಧವಾರ ದ.ಕ. ಜಿಲ್ಲೆಯಲ್ಲಿ ಪ್ರಥಮ ಸಭೆ ನಡೆದಿತ್ತು. ಆದರೆ ಶಾಸಕ ವೇದವ್ಯಾಸ ಕಾಮತ್ರವರು ಸಭೆಯ ಮಧ್ಯದಲ್ಲೇ ಎದ್ದು ಹೋಗಿರುವ ಕಾರಣ ಅವರಿಗೆ ಮಾಹಿತಿ ಕೊರತೆ ಇದೆ. ಅವರು ಗೊಂದಲಕ್ಕೀಡಾಗಿರಬಹುದು. ಆದರೆ ಹಿಂದುಳಿದ ವರ್ಗದ ಜನರು ಗೊಂದಲಕ್ಕೀಡಾಗಿಲ್ಲ. ಜನಪ್ರತಿನಿಧಿಗಳು ಜನರ ಏಳಿಗೆಗಾಗಿ ಸರಕಾರ ಅಥವಾ ಆಯೋಗ, ನಿಗಮ ಮತ್ತು ಮಂಡಳಿಗಳು ತೆಗೆದುಕೊಳ್ಳುವ ಉತ್ತಮ ಕ್ರಮಕ್ಕೆ ಪೂರಕವಾಗಿ ಕೆಲಸ ಮಾಡಬೇಕೇ ಹೊರತು ರಾಜಕೀಯ ಮಾಡಬಾರದು ಎಂದರು.
ವೇದವ್ಯಾ ಕಾಮತ್ ಅವರು ಶಾಸಕರಾಗಿದ್ದ ಸಂದರ್ಭದಲ್ಲಿ ರಾಜ್ಯದಲ್ಲಿ ಅವರದ್ದೇ ಸರಕಾರ ಆಡಳಿತದಲ್ಲಿದ್ದರೂ ಅಕ್ರಮ ಮರಳುಗಾರಿಕೆ ಅಥವಾ ಅಕ್ರಮ ಕೆಂಪು ಕಲ್ಲಿನ ಗಣಿಗಾರಿಕೆ ಮಟ್ಟ ಹಾಕಲು ಕ್ರಮ ವಹಿಸಿಲ್ಲ. ಇದರಿಂದ ರಾಜ್ಯದ ಬೊಕ್ಕಸಕ್ಕೆ ನೂರಾರು ಕೋಟಿ ರೂ. ಹಣ ನಷ್ಟವಾಗಿದೆ. ಇದೀಗ ಕಾಂಗ್ರೆಸ್ ಸರಕಾರ ಜನರಿಗೆ ಮರಳು ಮತ್ತು ಕೆಂಪು ಕಲ್ಲು ಕಾನೂನು ವ್ಯವಸ್ಥೆಯ ಅಡಿಯಲ್ಲಿ ಬರಲು ನಿಯಮಾವಳಿ ತಂದು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದೆ. ಆದರೆ ಈ ಬಗ್ಗೆಯೂ ಅಪಸ್ವರವನ್ನು ಬಿಜೆಪಿ ಶಾಸಕರು ಎತ್ತುತ್ತಿರುವುದು ವಿಪರ್ಯಾಸ ಎಂದರು.
ಜಿಲ್ಲೆಯ ಮಗನಾಗಿ, ಇಲ್ಲಿನ ಜನರ ಸಮಸ್ಯೆ ಹಾಗೂ ಜನರ ಆಶೋತ್ತರಗಳಿಗೆ ಸ್ಪಂದಿಸುವುದು ಅವರ ಕರ್ತವ್ಯ. ಜಿಲ್ಲೆಯಲ್ಲಿ ಸ್ಯಾಂಡ್ ಬಜಾರ್ ಆ?ಯಪ್ ತಂದು ಎಲ್ಲರಿಗೂ ಮರಳು ಕಡಿಮೆ ಬೆಲೆಗೆ ಸಿಗುವಂತೆ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಬುಧವಾರ ಹಿಂದುಳಿದ ವರ್ಗಗಳ ಆಯೋಗದ ಸಮೀಕ್ಷೆ ಕುರಿತಂತೆ ಜಾಗೃತಿ ಕಾರ್ಯಕ್ರಮ ನಡೆಸುವ ಮೂಲಕ ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ. ಆದರೆ ಇದನ್ನು ಅರ್ಥ ಮಾಡಿಕೊಳ್ಳಲು ಶಾಸಕ ವೇದವ್ಯಾಸ ಕಾಮತ್ ವಿಫಲರಾಗಿರುವುದು ಅವರು ಈ ಬಗ್ಗೆ ನಿನ್ನೆ ನೀಡಿರುವ ಹೇಳಿಕೆಯಿಂದ ಸಾಬೀತಾಗಿದೆ ಎಂದವರು ಹೇಳಿದರು.
ಎಲ್ಲದಕ್ಕೂ ರಾಜಕೀಯ ಮಾಡುವ ಶಾಸಕ ಕಾಮತ್ ಮಂಗಳೂರು ದಸರಾ ಕಾರ್ಯಕ್ರಮಕ್ಕೆ ಹಾಕಲಾದ ಫ್ಲೆಕ್ಸ್ಗಳನ್ನು ತೆಗೆಯುತ್ತಿರುವ ಬಗ್ಗೆ ಮೌನ ವಹಿಸಿರುವುದು ಯಾಕೆ ಎಂದು ಪ್ರಶ್ನಿಸಿದರು.
ಪಾಲಿಕೆ ಅಭಿವೃದ್ಧಿಗಾಗಿ ಸಿದ್ಧರಾಮಯ್ಯ ಸರಕಾರ 200 ಕೋಟಿ ರೂ. ಹಣ ಬಿಡುಗಡೆ ಮಾಡಿ ಈಗಾಗಲೇ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ನಡೆದಿದೆ. ಈ ಬಗ್ಗೆ ಜನರಿಗೆ ತಿಳಿಸದೆ ಸರಕಾರ ಅಭಿವೃದ್ಧಿಗೆ ಅನುದಾನ ನೀಡಿಲ್ಲ ಎಂಬ ರಾಜಕೀಯ ಹೇಳಿಕೆ ನೀಡುವುದು ಅವರ ವೈಫಲ್ಯ ಎಂದು ದೂರಿದರು.
ಮುಖಂಡರಾದ ಪ್ರಕಾಶ್ ಸಾಲ್ಯಾನ್, ಅಪ್ಪಿ, ಸುಹಾನ್ ಆಳ್ವ, ನೀರಜ್ ಪಾಲ್, ವಿಕಾಸ್ ಶೆಟ್ಟಿ, ನಮಿತಾ ಡಿ. ರಾವ್, ಟಿ. ಹೊನ್ನಯ್ಯ, ಚಂದ್ರಕಲಾ ಜೋಗಿ ಉಪಸ್ಥಿತರಿದ್ದರು.