ಎಸ್‌ಐಟಿ ಮುಖ್ಯಸ್ಥ ಪ್ರಣವ್ ಮೊಹಾಂತಿ ಬೆಳ್ತಂಗಡಿ ಕಚೇರಿಗೆ ಭೇಟಿ
ಮಂಗಳೂರು: ಎಸ್‌ಐಟಿ ಮುಖ್ಯಸ್ಥ ಪ್ರಣವ್ ಮೊಹಾಂತಿ ಅವರು ಕಳೆದ ಎರಡು ವಾರಗಳ ಬಳಿಕ ಭಾನುವಾರ ಬೆಳ್ತಂಗಡಿ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಬಹುತೇಕ ಸೋಮವಾರ ತಲೆಬುರುಡೆ ಲಭಿಸಿದೆ ಎನ್ನಲಾದ ಬಂಗ್ಲೆಗುಡ್ಡೆ ಪ್ರದೇಶದಲ್ಲಿ ಎಸ್‌ಐಟಿ ಮಹಜರು ನಡೆಸುವ ಸಾಧ್ಯತೆ ಇದೆ.
ಬಂಗ್ಲೆಗುಡ್ಡೆಯಲ್ಲಿ ಇನ್ನಷ್ಟು ಶವಗಳನ್ನು ಹೂಳಲಾಗಿದೆ ಎಂದು ಸೌಜನ್ಯ ಮಾವ ವಿಠಲ ಗೌಡ ಹಾಗೂ ಆತನ ಸಹಚರ ಪ್ರದೀಪ್ ಎಸ್‌ಐಟಿ ವಿಚಾರಣೆ ವೇಳೆ ಹೇಳಿದ್ದರು. ಈ ಹಿ ನ್ನೆಲೆಯಲ್ಲಿ ವಿಠಲ ಗೌಡ ಬುರುಡೆ ತೆಗೆದಿರುವುದಕ್ಕೆ ಸಾಕ್ಷಿಯಾಗಿ ಪ್ರದೀಪ್‌ನ್ನು ಶುಕ್ರವಾರ ಬೆಳ್ತಂಗಡಿ ಕೋರ್ಟ್‌ಗೆ ಹಾಜರುಪಡಿಸಿ ಎಸ್‌ಐಟಿ ಸಾಕ್ಷ್ಯ ದಾಖಲು ಮಾಡಿತ್ತು.
ಈ ಎಲ್ಲ ಬೆಳವಣಿಗೆ ಹಿನ್ನೆಲೆಯಲ್ಲಿ ಸೆ.15ರಂದು ಬಂಗ್ಲೆಗುಡ್ಡೆಯಲ್ಲಿ ಇವರನ್ನು ಎಸ್‌ಐಟಿ ಕರೆದುಕೊಂಡು ಹೋಗಿ ಸ್ಥಳ ಮಹಜರು ನಡೆಸುವ ಸಾಧ್ಯತೆ ಇದೆ. ಈ ವೇಳೆ ಆರೋಪ ದೃಢಪಟ್ಟರೆ ವಿಠಲ ಗೌಡ ಅಥವಾ ಪ್ರದೀಪ್‌ನ್ನು ಎಸ್‌ಐಟಿ ವಶಕ್ಕೆ ಪಡೆಯುವ ಸಾಧ್ಯತೆಯನ್ನೂ ಹೇಳಲಾಗಿದೆ. ಈಗಾಗಲೇ ವಿಠಲ ಗೌಡನನ್ನು ಸ್ಥಳಕ್ಕೆ ಕರೆಸಿಕೊಂಡು ಮಹಜರು ನಡೆಸಲಾಗಿದೆ.
ಎಸ್‌ಐಟಿ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದ ಪ್ರಣವ್ ಮೊಹಾಂತಿ, ಮುಂದಿನ ತನಿಖೆಯ ಮಗ್ಗುಲುಗಳ ಬಗ್ಗೆ ಚರ್ಚೆ ನಡೆಸಿದರು. ತನಿಖೆಯ ಹಾದಿಯ ಬಗ್ಗೆ ನೀಲನಕ್ಷೆ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಅವಶ್ಯವಿದ್ದರೆ ಮತ್ತೆ ವಿಚಾರಣೆಗೆ ಕರೆಸುವಂತೆಯೂ ಅವರು ಸೂಚನೆ ನೀಡಿದ್ದಾರೆ ಎಂದು ಹೇಳಲಾಗಿದೆ.