ಧರ್ಮಸ್ಥಳ ಪ್ರಕರಣ: ಚಿನ್ನಯ್ಯನಿಗೆ ಹಣ ನೀಡಿದವರಿಗೆ ಎಸ್‌ಐಟಿ ನೋಟಿಸ್
ಮಂಗಳೂರು: ಧರ್ಮಸ್ಥಳ ಗ್ರಾಮದ ಸುತ್ತಮುತ್ತ ನೂರಾರು ಶವಗಳನ್ನು ಹೂತು ಹಾಕಿರುವ ಆರೋಪದ ಪ್ರಕರಣ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಇದೀಗ ಬುರುಡೆ ಚಿನ್ನಯ್ಯ ಹಾಗೂ ಆತನ ಪತ್ನಿಯ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಿದವರಿಗೆ ಬಿಸಿ ಮುಟ್ಟಿಸಿದೆ.
ಹಣ ವರ್ಗಾವಣೆ ಮಾಡಿದವರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಆರೋಪಿ ಚಿನ್ನಯ್ಯನ ಬ್ಯಾಂಕ್ ಖಾತೆಗೆ 3 ಲಕ್ಷ ರು.ಗೂ ಅಧಿಕ ಮೊತ್ತ ಜಮೆಯಾಗಿತ್ತು. ಗೂಗಲ್ ಪೇ, ಫೋನ್ ಪೇ ಮೂಲಕ ಹಣ ಜಮೆಯಾಗಿರುವುದು ಕಂಡುಬಂದಿದೆ. ಈಗಾಗಲೇ ಚಿನ್ನಯ್ಯನ ಬ್ಯಾಂಕ್ ಖಾತೆ ವಿವರವನ್ನು ಎಸ್‌ಐಟಿ ಪಡೆದಿದೆ.
ನಿರೀಕ್ಷಣಾ ಜಾಮೀನಿಗೆ ಅರ್ಜಿ..
ಈ ನಡುವೆ ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಆರೋಪದಲ್ಲಿ ನಾಪತ್ತೆಯಾಗಿರುವ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಪರ ನಿರೀಕ್ಷಣಾ ಜಾಮೀನು ಕೋರಿ ವಕೀಲರು ಮಂಗಳೂರು ನ್ಯಾಯಾಲಯಕ್ಕೆ ಸೋಮವಾರ ಅರ್ಜಿ ಸಲ್ಲಿಸಿದ್ದಾರೆ. ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಆರೋಪದಲ್ಲಿ ಎರಡನೇ ಬಾರಿ ನೋಟಿಸ್ ನೀಡಿದರೂ ವಿಚಾರಣೆಗೆ ಮಹೇಶ್ ಶೆಟ್ಟಿ ಸೋಮವಾರ ಮಹೇಶ್ ಶೆಟ್ಟಿ ತಿಮರೋಡಿ ಗೈರಾಗಿದ್ದಾರೆ. ಸೆ.25ರೊಳಗೆ ವಿಚಾರಣೆಗೆ ಹಾಜರಾಗುವಂತೆ ಬೆಳ್ತಂಗಡಿ ಪೊಲೀಸರು ನೋಟಿಸ್ ನೀಡಿದ್ದರು.
ವಿಡಿಯೋ ಬಿಡುಗಡೆ..
ಪ್ರಕರಣದಲ್ಲಿ ಆರೋಪಿ ಚಿನ್ನಯ್ಯನಿಗೆ ಆಶ್ರಯ ನೀಡಿದ ಆರೋಪ ಎದುರಿಸುತ್ತಿರುವ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಚಿನ್ನಯ್ಯ ನಡುವಿನ ಸಂಭಾಷಣೆಯ ಒಂದೊಂದೇ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಯಾಗುತ್ತಿದೆ. 9 ರಿಂದ 12ರ ವರೆಗಿನ ವಿಡಿಯೋ ತುಣುಕುಗಳು ಬಿಡುಗಡೆಯಾಗಿದ್ದು, ಜಾಲ ತಾಣಗಳಲ್ಲಿ ವೈರಲ್ ಆಗಿವೆ
2023ರಲ್ಲಿ ತಿಮರೋಡಿ ಮನೆಯಲ್ಲಿ ಈ ವಿಡಿಯೋ ಸೆರೆ ಹಿಡಿಯಲಾಗಿದೆ ಎಂದು ಹೇಳಲಾಗಿದೆ. ಆದರೆ, ಅದನ್ನು ಯಾರೂ ಅಧಿಕೃತವಾಗಿ ಖಚಿತಪಡಿಸಿಲ್ಲ. ವಿಡಿಯೋಗಳಲ್ಲಿ ಧರ್ಮಸ್ಥಳ ಗ್ರಾಮದಲ್ಲಿ ನಡೆದ ಬೇರೆ, ಬೇರೆ ಸಾವಿನ ಘಟನೆಗಳ ಬಗ್ಗೆ ಚಿನ್ನಯ್ಯ ಮಾತನಾಡಿದ್ದಾನೆ. ಸೌಜನ್ಯ ಹತ್ಯೆಯ ನಂತರ ಏನೇನು ನಡೆಯಿತು, ಆರೋಪಿ ಸಂತೋಷ್ ರಾವ್ ಸೆರೆ ಸಿಕ್ಕಿದ್ದು ಹೇಗೆ, ನೇತ್ರಾವತಿಯಲ್ಲಿ ಸಿಕ್ಕಿದ ಚಿನ್ನವನ್ನು ಮಾರಾಟ ಮಾಡುತ್ತಿದ್ದುದಾಗಿ ಬಗ್ಗೆ ಚಿನ್ನಯ್ಯ ಹೇಳಿಕೊಂಡಿದ್ದಾನೆ.