ಕಲ್ಲಬೆಟ್ಟು ಕಾರ್ಯನಿರ್ವಹಣಾಧಿಕಾರಿಗೆ ಹಿಂಬಡ್ತಿ ಪ್ರಕರಣ- ಆದೇಶವನ್ನು ಹಿಂಪಡೆಯದಿದ್ದರೆ ಕಾನೂನು ಕ್ರಮ: ಶಾಸಕ ಕೋಟ್ಯಾನ್ ಎಚ್ಚರಿಕೆ
ಕಲ್ಲಬೆಟ್ಟು ಸೇವಾ ಸಹಕಾರಿ ಸಂಘದಲ್ಲಿ ಕಳೆದ ಮೂವತ್ತು ವರ್ಷಗಳಿಂದ ಉದ್ಯೋಗಿಯಾಗಿ, ಕಾರ್ಯನಿರ್ವಹಣಾಧಿಕಾರಿಯಾಗಿ ಕತ೯ವ್ಯ ನಿರ್ವಹಿಸಿದ ಅನಿತಾ ಶೆಟ್ಟಿ ಅವರನ್ನು ಯಾವುದೇ ನೋಟೀಸು, ಸೂಚನೆ ನೀಡದೆ ಹಿಂಭಡ್ತಿಗೊಳಿಸಿರುವುದನ್ನು ಖಂಡಿಸಿ ಸಂಘದ ಮುಂಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ ಅವರು ಸಹಕಾರಿ ಇಲಾಖೆಯ ಅಧಿಕಾರಿ ತ್ರಿವೇಣಿ ಅವರಿಗೆ ಮೊಬೈಲ್ ಕರೆಯ ಮೂಲಕ ಮಾತನಾಡಿ ಎಚ್ಚರಿಕೆ ನೀಡಿದರು.
ಜನಪ್ರತಿನಿಧಿಯಾಗಿರುವ ತನ್ನ ದೂರವಾಣಿ ಕರೆ ಸ್ವೀಕಾರ ಮಾಡದೆ, ಹಿಂತಿರುಗಿ ಕರೆಯನ್ನೂ ಮಾಡದೆ ಅಗೌರವ ತೋರಿರುವ , ವಾಟ್ಸಾಪ್ ಮಾಡಿ ವಿಷಯ ಕೇಳಿದರೂ ಸ್ಪಂದನ ನೀಡದಿರುವ ಬಗ್ಗೆ ಆಕ್ಷೇಪ ವ್ಯಕ್ತ ಪಡಿಸಿ ಶಾಸಕ ಕೋಟ್ಯಾನ್ ಗರಂ ಆಗಿ ತ್ರಿವೇಣಿ ಅವರನ್ನು ತರಾಟೆಗೆ ತೆಗೆದುಕೊಂಡರು.
ಸೇವಾ ಸಂಘದ ಮಾಜಿ ಅಧ್ಯಕ್ಷ ಕೆ. ಕೃಷ್ಣರಾಜ ಹೆಗ್ಡೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕಾಯ೯ನಿವ೯ಹಣಾಧಿಕಾರಿ ಅವರಿಗೆ ಸಹಕಾರಿ ಇಲಾಖೆಯ ಮೇಲಾಧಿಕಾರಿಗಳು ಅನ್ಯಾಯ ಮಾಡಿದ್ದಾರೆ, ಯಾರದ್ದೋ ದೂರಿನ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿದ್ದಾರೆ, ಇದು ಕಾನೂನುಬಾಹಿರವಾಗಿದ್ದು ಆಡಳಿತಾಧಿಕಾರಿ ಅವರಿಗೆ ಹಿಂಭಡ್ತಿ ಆದೇಶ ಮಾಡಲು ಯಾವುದೇ ಅಧಿಕಾರವಿಲ್ಲ ಎಂದು ತಿಳಿಸಿದರು.
ಮಾಜಿ ಅಧ್ಯಕ್ಷ ಸುರೇಶ್ ಕೋಟ್ಯಾನ್, ಉಪಾಧ್ಯಕ್ಷ ದಿಲೀಪ್ ಶೆಟ್ಟಿ, ನಿದೇ೯ಶಕರುಗಳಾದ ನಿವೃತ್ತ ಕಾರ್ಯನಿರ್ವಹಣಾಧಿಕಾರಿ ಪುರುಷೋತ್ತಮ ಶೆಟ್ಟಿ , ಮಾಜಿ ನಿರ್ದೇಶಕರುಗಳಾದ ಹರೀಶ್ ಶೆಟ್ಟಿ ಮಜಲೋಡಿ, ಶಶಿಧರ ಶೆಟ್ಟಿ, ನಳಿನಿ ಹೆಗ್ಡೆ, ಹಾಲಿ ನಿದೇ೯ಶಕರುಗಳು, ಬಿಜೆಪಿ ಕಾಂಗ್ರೆಸ್ ಸದಸ್ಯರು ಜತೆಯಾಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
