ಪುತ್ತೂರಿನ ‘ಮಗುಭಾಗ್ಯ’ ಪ್ರಕರಣ-ಶ್ರೀಕೃಷ್ಣ ಮಗುವಿನ ತಂದೆ: ಡಿಎನ್‌ಎ ಪರೀಕ್ಷೆಯಲ್ಲಿ ದೃಢ
7 ವರ್ಷಗಳಿಂದ ಗೆಳತಿಯಾಗಿದ್ದ ಯುವತಿಯನ್ನು ನಂಬಿಸಿ ಇದೀಗ ಮದುವೆಯಾಗುವುದಿಲ್ಲ ಎಂದು ವಂಚಿಸಿದ ಹಿನ್ನಲೆಯಲ್ಲಿ ಯುವತಿ ಪೊಲೀಸರಿಗೆ ದೂರು ಕೊಟ್ಟ ನಂತರ ಈ ಡಿಎನ್‌ಎ ಟೆಸ್ಟ್ ಆರೋಪಿ ವಿರುದ್ದ ದೊರೆತ ಪ್ರಮುಖ ಸಾಕ್ಷಿಯಾಗಿದೆ. ಯುವತಿ ಮೊದಲ ಬಾರಿಗೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಲು ಹೋದಾಗ ಆರೋಪಿ ಪರ ಕುಟುಂಬಸ್ಥರು ಕೇಸು ದಾಖಲಿಸದಂತೆ ನಡೆಸಿದ ಪ್ರಯತ್ನ ಯಶಸ್ವಿಯಾಗಿತ್ತು. ಈ ಹಂತದಲ್ಲಿ ಜೂ.23ಕ್ಕೆ ಶ್ರೀಕೃಷ್ಣ ಜೆ ರಾವ್ ಗೆ 23 ವರ್ಷ ತುಂಬಲಿದ್ದು, ಮರುದಿನವೇ ರಿಜಿಸ್ಟಾರ್ ಕಚೇರಿಯಲ್ಲಿ ಮದುವೆ ಮಾಡುವುದಾಗಿ ಮುಚ್ಚಳಿಕೆ ಬರೆದುಕೊಟ್ಟಿದ್ದರು. ಸ್ವತಹಾ ಆರೋಪಿ ಶ್ರೀಕೃಷ್ಣ ಜೆ ರಾವ್ ಕೂಡಾ ಮದುವೆಯಾಗುವುದಾಗಿ ಮುಚ್ಚಳಿಕೆ ಬರೆದುಕೊಟ್ಟಿದ್ದ. ಆದರೆ ಬಳಿಕ ತಮ್ಮ ವರಸೆ ಬದಲಾಯಿಸಿ ಮದುವೆಯಾಗಲಾರೆ ಎಂಬ ಸ್ಪಷ್ಟ ಸೂಚನೆಯನ್ನು ಯುವತಿ ಮನೆಯವರಿಗೆ ನೀಡಿದ್ದ. ಜೂನ್ 24ರಂದು 2ನೇ ಬಾರಿಗೆ ಪೊಲೀಸ್ ಠಾಣೆಯ ಮೆಟ್ಟಲೇರಿದ್ದ ಯುವತಿ ಕುಟುಂಬ ಪ್ರಕರಣ ದಾಖಲಿಸಿತ್ತು.
ಯುವತಿ ಮಗುವಿಗೆ ಜನ್ಮ ನೀಡಿದ ಬಳಿಕ ನಾಪತ್ತೆಯಾಗಿದ್ದ ಶ್ರೀಕೃಷ್ಣ ಜೆ ರಾವ್ 10 ದಿನಗಳ ಬಳಿಕ ಪುತ್ತೂರು ಪೊಲೀಸರು ಮೈಸೂರಿನ ಟಿ ನರಸೀಪುರದಲ್ಲಿ ಆತನನ್ನು ಬಂಧಿಸಿದ್ದರು. ಅತ್ಯಾಚಾರ ಹಾಗೂ ನಂಬಿಕೆ ದ್ರೋಹ ಪ್ರಕರಣ ಈತನ ಮೇಲೆ ದಾಖಲಾಗಿತ್ತು. ಆರೋಪಿ ಬಂಧನದ ಬಳಿಕ ಜುಲೈ 19ರಂದು ನ್ಯಾಯಾಲಯ ಆರೋಪಿಪರ ವಾದಿ ಮತ್ತು ಸಂತ್ರಸ್ತೆ ಪರ ವಕೀಲರ ವಾದವನ್ನು ಆಲಿಸಿತ್ತು. ಬಳಿಕ ಜು.25ರಂದು ನೀಡಿದ ತೀರ್ಪು ನೀಡಿದ ೬ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಈತನ ಜಾಮೀನು ಅರ್ಜಿಯನ್ನೂ ತಿರಸ್ಕರಿಸಿತ್ತು. ನಂತರದ ದಿನಗಳಲ್ಲಿ ಜಾಮೀನು ಪಡೆದುಕೊಂಡ ಆರೋಪಿ ಬಂಧನದಿಂದ ಬಿಡುಗಡೆಯಾಗಿದ್ದ.
ಮಗು ನನ್ನದಲ್ಲ:
ಆ ಮಗುವಿನ ತಂದೆ ನಾನಲ್ಲ ಎಂದು ಹೇಳಿದ್ದ ಆರೋಪಿ ತನ್ನ ಗೆಳತಿಗೆ ಹಲವರ ಸ್ನೇಹ ಇತ್ತು ಎಂದು ನೀಡಿರುವ ಹೇಳಿಕೆ ಇದೀಗ ಸುಳ್ಳಾಗಿದೆ. ಡಿಎನ್‌ಎ ಪರೀಕ್ಷೆ ಮೂಲಕ ಮಗುವಿನ ತಂದೆ ಯಾರೆಂಬುವುದು ಸ್ಪಷ್ಟವಾಗಿದೆ. ಆಕೆಯ ಜತೆಗೆ ಮದುವೆಯಾಗುವುದನ್ನು ತಪ್ಪಿಸಲು ಮಾಡಿದ ತಂತ್ರಗಾರಿಕೆ ವಿಫಲವಾಗಿದೆ.
ಮಗುವಿನ ತಂದೆ ಶ್ರೀಕೃಷ್ಣ ಜೆ. ರಾವ್:
ಈ ಪ್ರಕರಣಕ್ಕೆ ಸಂಬಂಧಿಸಿ ಡಿಎನ್‌ಎ ಪರೀಕ್ಷೆಯ ವರದಿ ಬಂದಿದೆ. ಶ್ರೀಕೃಷ್ಣ ಜೆ ರಾವ್ ಮಗುವಿನ ಅಪ್ಪ ಎಂದು ಸಂತ್ರಸ್ತೆಯ ಮನೆಯವರಿಗೆ ಮಾಹಿತಿ ನೀಡಲಾಗಿದೆ. ಹಿಂದೆ ಸೀತಾಮಾತೆಗೆ ಅಗ್ನಿಪರೀಕ್ಷೆ ನಡೆಯಿತು. ಆದರೆ ಆಧುನಿಕ ಕಾಲದಲ್ಲಿ ಡಿಎನ್‌ಎ ಪರೀಕ್ಷೆಯೇ ಅಂತಿಮವಾಗಿದೆ. ಹಾಗಾಗಿ ಆತ ಸಂತ್ರಸ್ತೆಯನ್ನು ಮದುವೆಯಾಗಬೇಕು. ಕೇಸನ್ನು ಮುಂದುವರಿಸಲು ನಮಗೆ ದೊಡ್ಡ ಆಸಕ್ತಿ ಇಲ್ಲ. ಯುವಕನ ಭವಿಷ್ಯಕ್ಕಾಗಿ ಅವರ ತಂದೆ-ತಾಯಿ ಪೂರಕವಾಗಿಯೋಚನೆ ಮಾಡಬೇಕು. ಮಗುವಿಗೆ ಅಪ್ಪ ಬೇಕು. ಈ ಯುವತಿಯನ್ನು ಮದುವೆಯಾಗಿ ಅವರು ಮನೆ ತುಂಬಿಸಿಕೊಳ್ಳಬೇಕು. ಹಾಗಾಗಿ ತಲೆತಗ್ಗಿಸಿಕೊಂಡು ಮಾತುಕತೆ ನಡೆಸಲು ಮುಂದಾಗಿದ್ದೇನೆ ಎಂದು ವಿಶ್ವಕರ್ಮ ಮಹಾಮಂಡಳದ ರಾಜ್ಯಾಧ್ಯಕ್ಷ ಕೆ.ಪಿ.ನಂಜುಂಡಿ ತಿಳಿಸಿದ್ದಾರೆ.
ಹಿಂದುತ್ವದ ಮೂಲವಾಗಿರುವ ಪುತ್ತೂರಿನಲ್ಲಿ ಹಿಂದುತ್ವಕ್ಕೆ ಮೆರುಗು ನೀಡಿರುವ ವಿಶ್ವಕರ್ಮ ಸಮಾಜದ ಬಡ ಹೆಣ್ಣುಮಗಳಿಗೆ ಅನ್ಯಾಯವಾದಂತೆ ಮಾಡಲು ಇಲ್ಲಿನ ಹಿಂದೂ ಸಂಘಟನೆಗಳು, ಹಿಂದೂ ಮುಖಂಡರು ಮುಂದಾಗಬೇಕು ಎಂದವರು ಆಗ್ರಹಿಸಿದರು. ಈ ಸಂದರ್ಭದಲ್ಲಿ ಸಂತ್ರಸ್ತೆ, ಆಕೆಯ ತಾಯಿ ನಮಿತಾ, ಸಂಘದ ಪದಾಧಿಕಾರಿಗಳಾದ ರಿಷಿ ಕುಮಾರ್ ಮತ್ತು ಮೋಹನ್ ಆಚಾರ್ಯ ಇದ್ದರು.