ಕೊಣಾಜೆಕಲ್ಲಿಗೆ ಚಾರಣಕ್ಕೆ ಬಂದಿದ್ದ ಚಾಟೆ೯ಡ್ ಅಕೌಂಟೆಂಟ್ ಹೃದಯಾಘಾತಕ್ಕೆ ಬಲಿ
ಪುತ್ತೂರಿನ ಬೆಟ್ಟಂಪ್ಪಾಡಿಯ ನಡುವಡ್ಕ ನಿವಾಸಿ ಗೋಪಾಲಕೃಷ್ಣ ಭಟ್ ಅವರ ಪುತ್ರ, ಮಂಗಳೂರಿನ ಯುವ ಚಾಟೆ೯ಡ್ ಅಕೌಂಟೆಂಟ್ ಮನೋಜ್ ಎನ್. (25ವ) ಹೃದಯಾಘಾತಕ್ಕೆ ಬಲಿಯಾದ ಯುವಕ.
ಮನೋಜ್ ತನ್ನ ಸ್ನೇಹತ ಕಾಸರಗೋಡಿನ ಆದೂರು ನಿವಾಸಿ ಕಾರ್ತಿಕ್ ಜತೆ ಮಂಗಳೂರಿನಿಂದ ದ್ವಿಚಕ್ರ ವಾಹನದಲ್ಲಿ ಕೊಣಾಜೆಕಲ್ಲಿಗೆ ಬೆಳಿಗ್ಗೆ 6.30ಕ್ಕೆ ಬಂದಿದ್ದರು.
ಕೊಣಾಜೆ ಕಲ್ಲಿನ ಮೇಲೆ ಹತ್ತುವ ಸಂದಭ೯ದಲ್ಲಿ ಮನೋಜ್ ಗೆ ಎದೆಯಲ್ಲಿ ನೋವು ಕಾಣಿಸಿಕೊಂಡಿದ್ದು ಆ ಸಂದಭ೯ ಸ್ನೇಹಿತನಲ್ಲಿ ನೀನು ಮುಂದಕ್ಕೆ ಹೋಗು ತಾನು ಸ್ವಲ್ಪ ಸಮಯ ವಿರಾಮ ಪಡೆದು ಬರುವುದಾಗಿ ತಿಳಿಸಿದ್ದರೆನ್ನಲಾಗಿದೆ. ಆತ ಮುಂದೆ ಚಲಿಸುವಾಗ ಮತ್ತೆ ಜೋರಾಗಿ ಎದೆ ನೋವು ಕಾಣಿಸಿಕೊಂಡಾಗ ಸ್ನೇಹಿತನನ್ನು ಕೂಗಿ ಕರೆದಾಗ ಆತ ತಕ್ಷಣ ಬಂದು ನೀರು ಕುಡಿಸಿದಾಗ ಕುಸಿದು ಬಿದ್ದು ಕೊನೆಯುಸಿರುಯೆಳೆದಿದ್ದಾರೆನ್ನಲಾಗಿದೆ.
ಈ ಹಿಂದೆಯೂ ಕೊಣಾಜೆಕಲ್ಲಿನಲ್ಲಿ ಕೆಲವು ದುರಂತಗಳು ನಡೆದಿದೆ. ಆದ್ದರಿಂದ ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳು ಸೂಕ್ತ ಕ್ರಮಕೈಗೊಂಡು ಮುಂದೆ ಆಗಬಹುದಾದ ದುರಂತಗಳನ್ನು ತಪ್ಪಿಸುವ ಅಗತ್ಯವಿದೆ.