
ಕಾರು-ದ್ವಿಚಕ್ರ ವಾಹನಕ್ಕೆ ಢಿಕ್ಕಿ: ಸವಾರ ಮೃತ್ಯು, ಸಹಸವಾರ ಗಾಯ
ಮಂಗಳೂರು: ಕಾರೊಂದು ದ್ವಿಚಕ್ರ ವಾಹನಕ್ಕೆ ಢಿಕ್ಕಿಹೊಡೆದು ಸಂಭವಿಸಿದ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟು, ಸಹಸವಾರ ಬಾಲಕ ಗಾಯಗೊಂಡಿರುವ ಘಟನೆ ಮುಕ್ಕ ಜಂಕ್ಷನ್‌ನಲ್ಲಿ ರವಿವಾರ ರಾತ್ರಿ ನಡೆದಿದೆ.
ಚೇಳಾಯರು ನಿವಾಸಿ ಕರುಣಾಕರ ಶೆಟ್ಟಿ(61) ಮೃತಪಟ್ಟವರು. ಮೂಲತಃ ಉತ್ತರ ಕರ್ನಾಟದ ಸದ್ಯ ಚೇಳಾಯರಿನಲ್ಲಿ ವಾಸವಿರುವ ಹನುಮಂತ ಎಂಬವರ ಪುತ್ರ ವಿಶ್ವನಾಥ (16) ಗಾಯಗೊಂಡ ಬಾಲಕ. ಆತನನ್ನು ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತಕ್ಕೆ ಕಾರಣವಾಗಿರುವ ಕಾರಿನ ಚಾಲಕ ಹಳೆಯಂಗಡಿ ನಿವಾಸಿ ಮುಹಮ್ಮದ್ ತೌಫೀಕ್ ಎಂಬವರನ್ನು ಸಂಚಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕರುಣಾಕರ ಶೆಟ್ಟಿ ಮುಕ್ಕದ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ರವಿವಾರ ರಾತ್ರಿ ಅಂಗಡಿ ಮುಚ್ಚಿ ತನ್ನ ದ್ವಿಚಕ್ರ ವಾಹನದಲ್ಲಿ ಮನೆಗೆ ಹೊರಟವರು ಹಾಲು ಖರೀದಿಗೆ ಬಂದಿದ್ದ ನೆರೆ ಮನೆಯ ವಿಶ್ವಾನಾಥರನ್ನು ಕುಳ್ಳಿರಿಸಿಕೊಂಡು ರಾಷ್ಟ್ರೀಯ ಹೆದ್ದಾರಿ 66ನ್ನು ದಾಟುತ್ತಿದ್ದ ವೇಳೆ ಹಳೆಯಂಗಡಿ ಕಡೆಯಿಂದ ಸುರತ್ಕಲ್ ತನ್ನ ತೆರಳುತ್ತಿದ್ದ ಕಾರು ಢಿಕ್ಕಿ ಹೊಡೆದಿದೆ.
ಅಪಘಾತದ ರಭಸಕ್ಕೆ ರಸ್ತೆಗೆ ಎಸೆಯಲ್ಪಟ್ಟ ಕರುಣಾಕರ ಶೆಟ್ಟಿ ಸ್ಥಳದಲ್ಲೇ ಮೃತಪಟ್ಟರು. ಸಹಸವಾರರಾಗಿದ್ದ ವಿಶ್ವನಾಥರಿಗೆ ಕೈಕಾಲಿಗೆ ಗಂಭೀರ ಗಾಯಗಳಾಗಿದ್ದು, ಮುಕ್ಕ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನಾ ಸ್ಥಳಕ್ಕೆ ಮಂಗಳೂರು ಉತ್ತರ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ.