‘ಧರ್ಮದೆಡೆಗೆ ನಮ್ಮ ನಡಿಗೆ’ ಬಿ.ಜೆ.ಪಿ.ಯಿಂದ ಧರ್ಮಸ್ಥಳ ಚಲೊ: ಧರ್ಮ ಸಂರಕ್ಷಣಾ ಯಾತ್ರೆ

‘ಧರ್ಮದೆಡೆಗೆ ನಮ್ಮ ನಡಿಗೆ’ ಬಿ.ಜೆ.ಪಿ.ಯಿಂದ ಧರ್ಮಸ್ಥಳ ಚಲೊ: ಧರ್ಮ ಸಂರಕ್ಷಣಾ ಯಾತ್ರೆ


ಉಜಿರೆ: ಬುರುಡೆ ಸರ್ಕಾರಕ್ಕೆ ಧಿಕ್ಕಾರ, ಷಡ್ಯಂತ್ರ ಮಾಡಿದ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ ಎಂಬ ಘೋಷಣೆಯೊಂದಿಗೆ ಭಾಷಣ ಪ್ರಾರಂಭಿಸಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಅಲ್ಪಸಂಖ್ಯಾತರನ್ನು ಕಡೆಗಣಿಸಿ, ಬಹುಸಂಖ್ಯಾತರ ಪರವಾಗಿ ಸರ್ಕಾರ ಹಿಂದೂಗಳ ವಿರುದ್ಧವಾಗಿ ಷಡ್ಯಂತ್ರ ಮಾಡುತ್ತಿದೆ ಎಂದು ಆರೋಪಿಸಿದರು. ಸಮಗ್ರ ಸಮಾಜವೇ ಇದನ್ನು ತಿರಸ್ಕಾರ ಮಾಡಬೇಕು ಎಂದು ಅವರು ಹೇಳಿದರು.


ಹೂತ ಶವವನ್ನು ಹೊರತೆಗೆಯಬೇಕಾದರೆ ನ್ಯಾಯಾಧೀಶರ ಅನುಮತಿ ಪಡೆಯಬೇಕು. ಮುಸುಕಧಾರಿಯಾಗಿದ್ದ ಅನಾಮಿಕ ಕಾಂಗ್ರೆಸ್ ಪಕ್ಷದ ಸ್ನೇಹಿತ ಎಂದು ಹೇಳಿದ ಸಚಿವರು ಮೂರು ಮಂದಿ ಐ.ಪಿ.ಎಸ್. ಅಧಿಕಾರಿಗಳಿದ್ದರೂ ಧರ್ಮಸ್ಥಳದಲ್ಲಿ ತ್ಯಾಗ ಮತ್ತು ಅಹಿಂಸಾ ಸಂದೇಶ ಸಾರಿದ ಬಾಹುಬಲಿ ಬೆಟ್ಟದಲ್ಲಿಯೂ ಶವ ಹೂತಿರುವುದಾಗಿ ಮುಸುಕುಧಾರಿ ಹೇಳಿದನೆಂದು ಅಲ್ಲಿ ಕೂಡಾ ಹೊಂಡ ತೆಗೆದಿರುವುದು ಅಚ್ಚರಿ ಉಂಟುಮಾಡಿದೆ. ದರ್ಗಾದಲ್ಲಿ ಅಥವಾ ಚರ್ಚ್ ಬಳಿ ಆದರೆ ಅವರು ಈ ರೀತಿ ಮಾಡುತ್ತಿದ್ದರೆ ಎಂದು ಸಚಿವರು ಯಕ್ಷಪ್ರಶ್ನೆ ಹಾಕಿದರು.


ದೇಶದ ಹಿತಕ್ಕಾಗಿ ಹಿಂದೂ ಸಮಾಜದ ಸಂಘಟನೆಯೊಂದಿಗೆ ಎಲ್ಲರೂ ಸದಾ ಜಾಗೃತರಾಗಿರಬೇಕು ಎಂದು ಅವರು ಕಿವಿಮಾತು ಹೇಳಿದರು.


ದೇಶ ವಿಭಜನೆಯ ಕಾಲದಿಂದಲೂ ಕಾಂಗ್ರೆಸ್ ವೋಟುಬ್ಯಾಂಕ್‌ಗಾಗಿ ರಾಜಕಾರಣ ಮಾಡುತ್ತಿದೆ. ಸಮಾಜವನ್ನು ಒಡೆಯುವ ಹುನ್ನಾರ ಮಾಡುತ್ತಿದೆ ಎಂದು ಅವರು ಆರೋಪಿಸಿದರು.


ಬಿ.ಜೆ.ಪಿ.ಯ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿ, ಹಿಂದೂ ಧಾರ್ಮಿಕ ಶ್ರದ್ಧಾಕೇಂದ್ರದ ವಿರುದ್ಧ ನಡೆಯುತ್ತಿರುವ ಷಡ್ಯಂತ್ರವನ್ನು ಖಂಡಿಸಿ ಧರ್ಮಸ್ಥಳದಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗಿದೆ.


ದೂರುದಾರನ ಪ್ರಾಥಮಿಕ ವಿಚಾರಣೆ ಹಾಗೂ ತನಿಖೆಯನ್ನೂ ಮಾಡದೆ, ಎಸ್.ಐ.ಟಿ. ರಚಿಸಿರುವುದನ್ನು ಅವರು ಖಂಡಿಸಿದರು. ಸೌಜನ್ಯ ಹತ್ಯೆ ಪ್ರಕರಣ ಮರುತನಿಖೆ ನಡೆಸಿ ಆಕೆಯ ಕುಟುಂಬಕ್ಕೆ ನ್ಯಾಯ ಒದಗಿಸುವಲ್ಲಿ ಬಿ.ಜೆ.ಪಿ. ಬೆಂಬಲ ನೀಡುತ್ತದೆ ಎಂದು ಅವರು ಭರವಸೆ ನೀಡಿದರು.,

ಚಾಮುಂಡಿ ಬೆಟ್ಟದ ಬಗ್ಯೆಯೂ ರಾಜಕೀಯ ಮಾಡಿರುವುದನ್ನು ಖಂಡಿಸಿದ ಅವರು ಕಾಂಗ್ರೆಸ್ ಸರ್ಕಾರ ಕಿತ್ತೊಸೆಯುವ ತನಕ ಹಿಂದೂಗಳು ಸಮ್ಮನೆ ಕೂರಲಾರರು ಎಂದು ಎಚ್ಚರಿಕೆ ನೀಡಿದರು.

ಧರ್ಮಸ್ಥಳದ ಬಗ್ಗೆ ಅಪಪ್ರಚಾರವನ್ನು ಖಂಡಿಸಿದ ಅವರು, ಕೋಟ್ಯಾಂತರ ಭಕ್ತರಿಗೆ ತೀವ್ರ ನೋವಾಗಿದೆ. ಹಿಂದೂಗಳ ತಾಳ್ಮೆಯ ಪರೀಕ್ಷೆ ಮಾಡಬೇಡಿ. ಧರ್ಮಸ್ಥಳ ಚಲೊ ಕಾರ್ಯಕ್ರಮವನ್ನು ಹಗುರವಾಗಿ ಪರಿಗಣಿಸಬೇಡಿ. ಪ್ರಕರಣವನ್ನು ಸಿ.ಬಿ.ಐ. ಅಥವಾ ಎನ್.ಐ.ಎ. ಮೂಲಕ ಇತ್ಯರ್ಥಗೊಳಿಸಬೇಕು. ಇಲ್ಲವಾದಲ್ಲಿ ನ್ಯಾಯ ಸಿಗಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.

ಪ್ರತಿಪಕ್ಷ ನಾಯಕ ಆರ್. ಅಶೋಕ ‘ಬುರುಡೆ ಸಿದ್ಧರಾಮಯ್ಯನಿಗೆ ಧಿಕ್ಕಾರ’ ಎಂದು ಭಾಷಣ ಪ್ರಾರಂಭಿಸಿ, ಸಿದ್ದರಾಮಯ್ಯ ಸುತ್ತ ನಕ್ಸಲ್ ಗ್ಯಾಂಗ್ ಹಾಗೂ ನಗರ ನಕ್ಸಲರ ಕೈವಾಡವಿದೆ. ಎಸ್.ಐ.ಟಿ. ಕೇವಲ ಕೆರೆಯ ಮೀನುಗಳನ್ನು ಹಿಡಿದಿದೆ. ಸಮುದ್ರ ತಿಮಿಂಗಿಲಗಳನ್ನು ಹಿಡಿಯಬೇಕು. ಎಸ್.ಐ.ಎ.ಗೆ ಪ್ರಕರಣ ಹಸ್ತಾಂತರಿಸಿದರೆ ಮಾತ್ರ ನ್ಯಾಯ ಸಿಗಬಹುದು ಎಂದು ಅವರು ಅಭಿಪ್ರಾಯಪಟ್ಟರು.

ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಜಾತ್ಯಾತೀತ ಹೆಸರಿನಲ್ಲಿ ಹಿಂದೂ ಧರ್ಮವನ್ನು ಒಡೆಯುವ ಕೆಲಸ ಮಾಡಿದ್ದಾರೆ. ಅವರು ಧರ್ಮಸ್ಥಳದ ಭಕ್ತರ ಕ್ಷಮೆ ಕೇಳಬೇಕು. ನಾಡಿನ ಜನತೆಯ ಶಾಪದಿಂದ ರಾಜ್ಯ ಸರ್ಕಾರ ಸದ್ಯದಲ್ಲೆ ಪತನವಾಗುವುದು ಖಚಿತ ಎಂದು ಭವಿಷ್ಯ ನುಡಿದರು.

ಸಿ.ಟಿ. ರವಿ ಮಾತನಾಡಿ, ದೂರುದಾರನ ಹಿನ್ನೆಲೆ ತಿಳಿಯದೆ, ಮಂಪರುಪರೀಕ್ಷೆ ಮಾಡದೆ ಎಡಪಂಥೀಯರ ಮಾತುಕೇಳಿ ಎಸ್.ಐ.ಟಿಗೆ ಪ್ರಕರಣ ಒಪ್ಪಿಸಿರುವುದು ಸರಿಯಲ್ಲ ಎಂದು ಹೇಳಿದರು.

ಸುಧಾಕರ ರೆಡ್ಡಿ, ಛಲವಾದಿ ನಾರಾಯಣ ಸ್ವಾಮಿ, ಮಾಜಿ ಸಚಿವ ಶ್ರೀರಾಮುಲು ಕೂಡಾ ಎಸ್.ಐ.ಟಿ. ತನಿಖೆ ಹಾಗೂ ಅನಾಮಿಕನ ವರ್ತನೆಯನ್ನು ಖಂಡಿಸಿದರು.

ಸುನಿಲ್ ಕುಮಾರ್ ಕಾರ್ಕಳ, ದೊಡ್ಡಣ್ಣ ಗೌಡ ಪಾಟೀಲ್, ಮುನಿರತ್ನ, ಭಾರತಿ ಶೆಟ್ಟಿ, ರೇನುಕಾಚಾರ್ಯ, ಭಾಗೀರಥಿ ಮುರುಳ್ಯ, ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ತೇಜಸ್ವಿಸೂರ್ಯ, ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ನಳಿನ್ ಕುಮಾರ್ ಕಟೀಲ್ ಮತ್ತಿಇತರರು ಉಪಸ್ಥಿತರಿದ್ದರು.

ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಸ್ವಾಗತಿಸಿದರು. ಬಿ.ವೈ. ವಿಜಯೇಂದ್ರ ವಂದಿಸಿ, ಬಿ.ಜೆ.ಪಿ. ದ.ಕ. ಜಿಲ್ಲಾ ಅಧ್ಯಕ್ಷ ಸತೀಶ್ ಕುಂಪಲ ಕಾರ್ಯಕ್ರಮ ನಿರ್ವಹಿಸಿದರು.


Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article