
ಕಾರ್ಣಿಕ ಮೆರೆದ ಮಟ್ಟಾರು ಬಬ್ಬರ್ಯ ದೈವ....!
ಕಳೆದ ಜೂನ್ 27 ರಂದು ರಾತ್ರಿ ಮಟ್ಟಾರು ಪರಿಸರದ ಪವಿತ್ರಾ ಎಂಬವರ ಮನೆಗೆ ನುಗ್ಗಿದ ಕಳ್ಳ ಮನೆಯ ಕಪಾಟಿನಲ್ಲಿ ಇದ್ದ ಸುಮಾರು 15 ಲಕ್ಷ ರೂ. ಮೌಲ್ಯದ ಚಿನ್ನವನ್ನು ಕಳ್ಳತನ ಮಾಡಿ ಕೊಂಡು ಹೋಗಿದ್ದು, ಜೂ.28ರ ಬೆಳಗ್ಗಿನ ಜಾವ ಈ ಪ್ರಕರಣ ಮನೆಯವರ ಗಮನಕ್ಕೆ ಬಂದಿದೆ. ಕೂಡಲೇ ಶಿರ್ವ ಪೊಲೀಸರಿಗೆ ಮಾಹಿತಿ ನೀಡಿ, ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ತನಿಖೆ ಕೈಗೆತ್ತಿಕೊಂಡರು. ಆದರೆ ತನಿಖೆಗೆ ಪೂರಕವಾದ ಅಂಶಗಳು ದೊರಕದೆ ಪೊಲೀಸರ ಪಾಲಿಗೆ ಪ್ರಕರಣ ಬೇಧಿಸಲು ಕಷ್ಟವಾಗಿತ್ತು.
ಈ ಸಂದರ್ಭದಲ್ಲಿ ಮಟ್ಟಾರ್ ದೈವಸ್ಥಾನದ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ ಹಾಗೂ ಆಡಳಿತ ಮಂಡಳಿಯ ಸದಸ್ಯರು ಮತ್ತು ಸಮಸ್ತ ಗ್ರಾಮಸ್ತರು ಒಟ್ಟಾಗಿ ದೈವದ ಮೊರೆಹೋಗಿದ್ದು, ಕಳವಾದ ಬಂಗಾರವನ್ನು ಮರಳಿ ಸಿಗುವಂತೆ ದೈವಸಾನಿಧ್ಯದಲ್ಲಿ ಪ್ರಾರ್ಥಿಸಿದ್ದರು.
‘ನಂಬಿನಕಲೆನ ಕೈ ಬುಡಯೆ’ ಎನ್ನುವ ನುಡಿಯೊಂದಿಗೆ ಭಕ್ತರಿಗೆ ಅಭಯವನ್ನು ನೀಡುವ ‘ಮಟ್ಟಾರ ದೈವ’ ಭಕ್ತರ ಪ್ರಾರ್ಥನೆಗೆ ಒಲಿದು, ಅತ್ಯಂತ ಕಷ್ಟಕರವಾಗಿದ್ದ ಪ್ರಕರಣವನ್ನು ಪೊಲೀಸರು ಬೇಧಿಸುವಲ್ಲಿ ಮರಳಿ ಯಶಸ್ವಿಯಾಗಿ, ದೇವರಲ್ಲಿ ಪ್ರಾರ್ಥಿಸಿದ್ದ ಒಂದು ವಾರದ ಒಳಗಾಗಿ ಕಳವಾದ ಬಂಗಾರ ಮರಳಿ ಸಿಕ್ಕಿ, ಮನೆಯವರಿಗೆ ಹಸ್ತಾಂತರವಾಗಿದೆ ಮತ್ತು ಲಕ್ಷಾಂತರ ಭಕ್ತರ ಪ್ರಾರ್ಥನೆ ಫಲಿಸಿದೆ.