ಸಂತ ಫಿಲೋಮಿನಾ ಕಾಲೇಜಿನಲ್ಲಿ ಎನ್‌ಎಸ್‌ಎಸ್ ಫೆಸ್ಟ್-ಫಿಲೋ ಸೇವಾಮೃತ-2025 ಉದ್ಘಾಟನೆ
Saturday, September 27, 2025
ಪುತ್ತೂರು: ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ಎನ್‌ಎಸ್‌ಎಸ್ ಘಟಕದ ವತಿಯಿಂದ ಎನ್‌ಎಸ್‌ಎಸ್ ದಿನ ಮತ್ತು ವಾರ್ಷಿಕೋತ್ಸವ ಫಿಲೋ-ಸೇವಾಮೃತ-2025 ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ಕಾಲೇಜಿನ ಬೆಳ್ಳಿ ಹಬ್ಬ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಪುತ್ತೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಶುಂಪಾಲ ಪ್ರೊ. ಸುಬ್ಬಪ್ಪ ಕೈಕಂಬ ಮಾತನಾಡಿ, ನನಗೆ ಬದುಕನ್ನು ರೂಪಿಸಿದ್ದು ಎನ್‌ಎಸ್‌ಎಸ್. ಇದೊಂದು ಕ್ರಿಯಾಶೀಲವಾದ ಸಂಘಟನೆಯಾಗಿದೆ. ದ್ವೇಷ, ಅಸೂಯೆ ಮನದಿಂದ ಕಳೆದು ಸೇವೆಯನ್ನು ಮಾಡೋದೆ ಎನ್‌ಎಸ್‌ಎಸ್ ಆಗಿದೆ. ಎನ್‌ಎಸ್‌ಎಸ್ ಮೂಲಕ ನಮ್ಮನ್ನು ನಾವು ಸ್ವಚ್ಛ ಮಾಡಿಕೊಳ್ಳುತ್ತೇವೆ. ಎನ್‌ಎಸ್‌ಎಸ್ ಸಂಬಂಧವನ್ನು ಹಾಗೂ ಪ್ರೀತಿಯನ್ನು ಕಟ್ಟುವ ಕೆಲಸವನ್ನು ಮಾಡುತ್ತದೆ. ಇನ್ನೊಬ್ಬರನ್ನು ದ್ವೇಷಿಸದ ಹಾಗೆ ಎನ್‌ಎಸ್‌ಎಸ್ ನಮ್ಮನ್ನು ಬೆಳೆಸುತ್ತದೆ. ಎನ್‌ಎಸ್‌ಎಸ್‌ನಿಂದಾಗಿ ಸ್ವಚ್ಛ ಸುಂದರವಾದ ವಾತಾವರಣ ನಿರ್ಮಾಣವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ವಂ. ಫಾ. ಡಾ ಆಂಟನಿ ಪ್ರಕಾಶ್ ಮೊಂತೆರೊ ಮಾತನಾಡಿ, ಎನ್‌ಎಸ್‌ಎಸ್‌ನಲ್ಲಿ ಪ್ರತಿಯೊಬ್ಬರೂ ‘ಸೇವೆ’ ಎಂಬ ಪದವನ್ನು ಬಳಸುತ್ತಾರೆ, ಆದರೆ ನೀವು ಸಾಮಾನ್ಯ, ಜವಾಬ್ದಾರಿಯುತ ವಿದ್ಯಾರ್ಥಿಗಳಾಗಿ, ಕುಟುಂಬದ ಸಾಮಾನ್ಯ ಮಕ್ಕಳಾಗಬೇಕು. ನಿಮಗೆ ಜೀವನದ ಗಾಂಭೀರ್ಯ ತಿಳಿದಿದ್ದರೆ, ನೀವು ಜವಾಬ್ದಾರಿಯುತ ಮಗುವಾಗುತ್ತೀರಿ. ನೀವು ಅಸಾಧಾರಣ ಸೇವೆಯನ್ನು ಮಾಡಬೇಕಾಗಿಲ್ಲ, ಮನೆಯಲ್ಲಿ ಜವಾಬ್ದಾರಿಯುತ ಮಗುವಾಗಲು ಪ್ರಯತ್ನಿಸಿ. ಶಿಕ್ಷಣವನ್ನು ಪಡೆದು ಎಲ್ಲಾ ಆಯಾಮಗಳನ್ನು ಅಭಿವೃದ್ಧಿಪಡಿಸಿ. ಜವಾಬ್ದಾರಿಗಳನ್ನು ಕಲಿಯಿರಿ ಎಂದು ಹೇಳಿದರು.
ವೇದಿಕೆಯಲ್ಲಿ ಎನ್‌ಎಸ್‌ಎಸ್ ಘಟಕದ ಅಧಿಕಾರಿಗಳಾದ ಡಾ. ಚಂದ್ರಶೇಖರ್ ಕೆ. ಮತ್ತು ಪುಷ್ಪಾ ಎನ್., ಎನ್‌ಎಸ್‌ಎಸ್ ಕಾರ್ಯದರ್ಶಿ ವಿಷ್ಣುಜೀತ್, ಯೂನಿಟ್ ಲೀಡರ್ಸ್ ಮನ್ವಿತ್, ಮನೀಶ್ ಬಿ.ಪಿ., ಜಿ. ಲವಿಕಾ, ಪುಣ್ಯ ಕೆ., ಕಾಲೇಜಿನ ಉಪ ಪ್ರಾಶುಂಪಾಲರಾದ ಡಾ. ವಿಜಯ್ ಕುಮಾರ್ ಎಂ., ಪಿಆರ್‌ಒ ಭಾರತಿ ಎಸ್. ರೈ ಮತ್ತಿತರರು ಉಪಸ್ಥಿತರಿದ್ದರು.
ಉದ್ಘಾಟನಾ ಸಮಾರಂಭದಲ್ಲಿ ವಿದ್ಯಾರ್ಥಿನಿ ಮನ್ವಿತ್ ಬಿ.ಎಸ್. ಅತಿಥಿಯನ್ನು ಪರಿಚಯಿಸಿದರು. ಎನ್‌ಎಸ್‌ಎಸ್ ಅಧಿಕಾರಿ ಪುಷ್ಪಾ ಎನ್. ಸ್ವಾಗತಿಸಿ, ವಿದ್ಯಾರ್ಥಿ ಮನೀಶ್ ವಂದಿಸಿದರು. ಸಿಂಚನ ಕಾರ್ಯಕ್ರಮವನ್ನು ನಿರೂಪಿಸಿದರು.