ಪವಾಡಕ್ಕೆ ಸಾಕ್ಷಿಯಾದ ಬೆಂದ್ರ್ ತೀರ್ಥ
Wednesday, September 3, 2025
ಪುತ್ತೂರು: ದಕ್ಷಿಣ ಭಾರತದ ಬಿಸಿನೀರಿನ ಚಿಲುಮೆ ಇರುವ ಏಕೈಕ ಕೆರೆ ಬೆಂದ್ರ್ ತೀರ್ಥದಲ್ಲಿ ಈಚೆಗೆ ತೀರ್ಥ ಸ್ನಾನ ಸೇವೆ ನಡೆಯಿತು. ಶತಮಾನಗಳ ಇತಿಹಾಸ ಹೊಂದಿರುವ ಧಾರ್ಮಿಕ ಶ್ರದ್ಧಾ ಕೇಂದ್ರ ಬೆಂದ್ರ್ ತೀರ್ಥ ತಾಲ್ಲೂಕಿನ ಇರ್ದೆ ಗ್ರಾಮದಲ್ಲಿದೆ.
ಈ ಬಾರಿ 3000ಕ್ಕೂ ಅಧಿಕ ಭಕ್ತಾದಿಗಳು ತೀರ್ಥ ಸ್ನಾನ ಸೇವೆಯಲ್ಲಿ ಪಾಲು ಪಡೆದುಕೊಂಡಿರುವುದು ವಿಶೇಷ.
ಮುಂಜಾನೆ 4 ರಿಂದ ವಿಷ್ಣುಮೂರ್ತಿ ದೇವಳದ ಅರ್ಚಕರಿಂದ ಬೆಂದ್ರ್ ತೀರ್ಥ ಕೆರೆ ಗೆ ಮತ್ತು ಅಶ್ವಥ ಕಟ್ಟೆ ಪೂಜೆ, ನಂತರ ಮಧ್ಯಾಹ್ನ 2 ರ ತನಕ ತೀರ್ಥ ಸ್ನಾನ ಸೇವೆ ನಡೆಯಿತು.
ಶಿವಾಜಿ ಯುವ ಸೇನೆ ಬೆಂದ್ರ್ ತೀರ್ಥ, ಇರ್ದೆ ಸಂಘಟನೆಯು ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆಂದೇ ಸ್ಥಾಪಿತವಾಗಿರುವ ಸಂಘಟನೆ. ಇದು ಹಲವು ವರ್ಷಗಳಿಂದ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದೆ ಅಂತೆಯೇ ಈ ಬಾರಿಯೂ 50ಕ್ಕಿಂತ ಹೆಚ್ಚು ಕಾರ್ಯಕರ್ತರು ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಿದರು.
ಸ್ಥಳದಲ್ಲಿ ಸೂಚನಾ ಫಲಕಗಳನ್ನು ಅಳವಡಿಸಿ ಭಕ್ತರಿಗೆ ಮಾಹಿತಿ ಒದಗಿಸಲಾಯಿತು.
ಈ ಸಂದರ್ಭ ಮುಂಜಾಗೃತಾ ಕ್ರಮವಾಗಿ ಮುಂಜಾನೆ 4 ರಿಂದ ಧರ್ಮಸ್ಥಳ ಶೌರ್ಯ ವಿಪತ್ತು ತಂಡ ಮತ್ತು ಪುತ್ತಿಲ ಪಾರಿವಾರದ ಆಂಬುಲೆನ್ಸ್ ಸ್ಥಳದಲ್ಲಿ ನಿಯೋಜಿಸಲಾಗಿತ್ತು.
ವಿಶೇಷವೇನೆಂದರೆ ಮುಂಜಾನೆ 3.30ರ ವೇಳೆ ತಣ್ಣಾಗಿದ್ದ ನೀರು ಪೂಜೆಯ ಬಳಿಕ ಬೆಂದ್ರ್ ತೀರ್ಥವಾಗಿ (ಬೆಚ್ಚಗಿನ ನೀರಾಗಿ) ಬದಲಾದುದು ಪವಾಡ. ಇದು ಬೆಂದ್ರ್ ತೀರ್ಥ ಕೆರೆಯ ಶತಮಾನಗಳ ಇತಿಹಾಸಕ್ಕೆ ಸಾಕ್ಷಿಯಾಗಿದೆ.

