ಸರ್ಕಾರಿ ಸೌಲಭ್ಯಕ್ಕೆ ಲಂಚ ಪಡೆದ ಪ್ರಕರಣ: ಪೆರುವಾಯಿ ಗ್ರಾಪಂ ಅಧ್ಯಕ್ಷರನ್ನು ಪಕ್ಷದಿಂದ ವಜಾ ಮಾಡಿ-ಆಗ್ರಹ
ಪುತ್ತೂರು: ಸರ್ಕಾರದ ಇಲಾಖೆಯಿಂದ ದೊರೆತ ಕೊಳವೆಬಾವಿ ವಿಚಾರದಲ್ಲಿ ಫಲಾನುಭವಿಗಳಿಂದ ಲಂಚ ಪಡೆದು ಲೋಕಾಯುಕ್ತ ಬಲೆಗೆ ಬಿದ್ದ ಪೆರುವಾಯಿ ಗ್ರಾಪಂ ಅಧ್ಯಕ್ಷೆ ಹಾಗೂ ದಕ ಜಿಲ್ಲಾ ಮಹಿಳಾ ಕಾಂಗ್ರೇಸ್ ಕಾರ್ಯದರ್ಶಿ ನಫೀಸಾ ಅವರನ್ನು ಕಾಂಗ್ರೇಸ್ ಪಕ್ಷದಿಂದ ತಕ್ಷಣ ವಜಾ ಮಾಡಬೇಕು. ಗ್ರಾಪಂ ಅಧ್ಯಕ್ಷತೆಗೆ ರಾಜೀನಾಮೆ ನೀಡಬೇಕು. ಗ್ರಾಪಂಗೆ ಆಡಳಿತಾಧಿಕಾರಿ ನೇಮಕ ಮಾಡಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಪೆರುವಾಯಿ ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷ ಬಾಲಕೃಷ್ಣ ಪೂಜಾರಿ ಹಾಗೂ ಪುಣಚ ಮಹಾಶಕ್ತಿಕೇಂದ್ರದ ಅಧ್ಯಕ್ಷ ರಾಜೇಶ್ ಬಾಳೆಕಲ್ಲು ಅವರು ಆಗ್ರಹಿಸಿದ್ದಾರೆ.
ಗುರುವಾರ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಿಂದ ಗಿರಿಜನ ಉಪಯೋಜನೆ ಮತ್ತು ವಿಶೇಷ ಘಟಕ ಯೋಜನೆ ಕಾರ್ಯಕ್ರಮದಡಿಯಲ್ಲಿ ನೀಡಲಾಗುವ ಕೊಳವೆಬಾವಿಗೆ ಫಲಾನುಭವಿಯಿಂದ ರೂ.10 ಸಾವಿರ ಲಂಚ ಪಡೆದುಕೊಂಡಿರುವ ನಫೀಸಾ ಅವರು ನೈತಿಕಕತೆ ಇದ್ದರೆ ತಕ್ಷಣ ಗ್ರಾಪಂ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಬೇಕು. ಅವರು ಪುತ್ತೂರು ಶಾಸಕರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದು, ಶಾಸಕ ಕಾಲಬುಡದಲ್ಲಿ ಈ ಲಂಚ ಪ್ರಕರಣ ನಡೆದಿದೆ. ಶಾಸಕರಿಗೆ ನೈತಿಕತೆ- ಪ್ರಾಮಾಣಿಕತೆ ಇದ್ದರೆ ತಕ್ಷಣ ಅವರನ್ನು ಪಕ್ಷದಿಂದ ವಜಾಗೊಳಿಸಬೇಕು ಎಂದರು.
ಶಾಸಕರ ಶಿಫಾರಸ್ಸು ಪತ್ರ ಪಡೆದುಕೊಂಡು ಅಕ್ರಮಸಕ್ರಮ ಮಂಜೂರು ಮಾಡಿಸುವುದು. 94ಸಿ ಹಕ್ಕುಪತ್ರ ಕೊಡಿಸುವುದು. ಅಕ್ರಮ ಕೆಂಪುಕಲ್ಲಿನ ಗಣಿಗಾರಿಕೆಗೆ ನೆರವು ನೀಡುವುದು. ಗುತ್ತಿಗೆದಾರರ ಜತೆಗೆ ಶಾಮೀಲಾಗಿ ಹಣ ಪಡೆಯುತ್ತಿರುವ ಹಲವಾರು ಆರೋಪಗಳು ಅವರ ಮೇಲಿದೆ. ಹೀಗಿದ್ದರೂ ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತಿರುವ ಪುತ್ತೂರು ಶಾಸಕರು ಮೌನ ವಹಿಸಿರುವುದು ಸಂಶಯಕ್ಕೆ ಕಾರಣವಾಗಿದೆ. ಮಾಧ್ಯಮಗಳ ಮುಂದೆ ಲಂಚ ಪಡೆದ ಅಧಿಕಾರಿಗಳನ್ನು ಗದರಿಸಿ ಲಂಚದ ಹಣವನ್ನು ವಾಪಾಸು ಕೊಡಿಸುವ ಶಾಸಕರು ಈ ಪ್ರಕರಣದಲ್ಲಿ ಮಾತೇ ಆಡುತ್ತಿಲ್ಲ. ಪುತ್ತೂರು ಶಾಸಕರು ಕಾಂಗ್ರೇಸ್ ಕಾರ್ಯಕರ್ತರಿಗೆ ಹಾಗೂ ಮುಂದಿನ ಬಾರಿ ಮತ ನೀಡುತ್ತೇವೆ ಎಂದು ಭರವಸೆ ನೀಡುವ ಬಿಜೆಪಿ ಕಾರ್ಯಕರ್ತರಿಗೆ ಮಾತ್ರ ಸರ್ಕಾರಿ ಸವಲತ್ತು ನೀಡುವ ತಾರತಮ್ಯ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಗೋಷ್ಠಿಯಲ್ಲಿ ಪೆರುವಾಯಿ ಗ್ರಾಪಂ ಉಪಾಧ್ಯಕ್ಷೆ ಲಲಿತಾ ಆಚಾರ್ಯ, ಪೆರುವಾಯಿ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಗೋಪಾಲ ಕೆ. ಉಪಸ್ಥಿತರಿದ್ದರು.