
ಉಜಿರೆ ಎಸ್.ಡಿ.ಎಂ ಕಾಲೇಜಿನಲ್ಲಿ ವಿಶ್ವ ಓಝೋನ್ ದಿನಾಚರಣೆ
Wednesday, September 17, 2025
ಉಜಿರೆ: ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ರಸಾಯನ ಶಾಸ್ತ್ರ ವಿಭಾಗ ಮತ್ತು ರೋವರ್ಸ್ ರೇಂಜರ್ಸ್ ಘಟಕದ ಸಹಭಾಗಿತ್ವದಲ್ಲಿ ಸೆ.16 ರಂದು ವಿಶ್ವ ಓಝೋನ್ ದಿನವನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಎಸ್. ಡಿ.ಎಂ ತಾಂತ್ರಿಕ ಸಂಸ್ಥೆಯ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಕೃಷ್ಣಪ್ರಸಾದ್ ಪಿ.ಎ ಮುಖ್ಯ ಅತಿಥಿಯಾಗಿ ಮಾತನಾಡಿದರು.ಓಝೋನ್ ನ ಅನ್ವೇಷಣೆ, ವೈಜ್ಞಾನಿಕ ಹಿನ್ನಲೆ, ಓಝೋನ್ ಪದರದ ಸವೆತಕ್ಕೆ ಕಾರಣವಾಗುವ ಮಾನವನ ಚಟುವಟಿಕೆಗಳು ಮತ್ತು ಓಝೋನ್ ಪದರದ ಸವೆತ ತಡೆಗಟ್ಟು ವಲ್ಲಿ ವಿಶ್ವವ್ಯಾಪಿ ಜಾರಿಯಾಗಿರುವ ಕ್ರಮಗಳ ಬಗ್ಗೆ ವಿವರವಾಗಿ ತಿಳಿಸಿದರು.
ಕಾಲೇಜಿನ ಉಪಪ್ರಾಂಶುಪಾಲೆ ಮತ್ತು ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥೆ ನಂದಕುಮಾರಿ ಕೆ.ಪಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಭೂಮಿಯ ರಕ್ಷಣೆಯಲ್ಲಿ ಓಝೋನ್ ಪದರದ ಮಹತ್ವವನ್ನು ಅರಿತು ಅದರ ಸವೆತಕ್ಕೆ ಕಾರಣವಾಗುತ್ತಿರುವ ಮಾನವ ಕ್ರಿಯೆಗಳನ್ನು ತಡೆಯುವಲ್ಲಿ ನಾವುಗಳು ಶ್ರಮಿಸಿಬೇಕಿದೆ.ವಿಜ್ಞಾನದ ವಿದ್ಯಾರ್ಥಿಗಳು ಪರಿಸರದ ಬಗ್ಗೆ ವಿಶೇಷ ಕಾಳಜಿಯನ್ನು ಮೈಗೂಡಿಸಿಕೊಂಡು ಪರಿಸರವನ್ನು ಉಳಿಸಿ, ಬೆಳೆಸುವಲ್ಲಿ ಕೈಜೋಡಿಸಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ರೋವರ್ಸ್ ರೇಂಜರ್ಸ್ ಘಟಕದ ಸಂಯೋಜಕ ಪ್ರಸಾದ್ ಕುಮಾರ್, ರಸಾಯನ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಗಾನವಿ.ಡಿ ಮತ್ತು ರಸಾಯನ ಶಾಸ್ತ್ರ ವಿಭಾಗದ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ತೃತೀಯ ಬಿಎಸ್ಸಿ ವಿದ್ಯಾರ್ಥಿನಿ, ರೇಂಜರ್ ನವ್ಯಶ್ರೀ ಮುಖ್ಯ ಅತಿಥಿಯನ್ನು ಪರಿಚಯಿಸಿದರು. ತೃತೀಯ ಬಿಎಸ್ಸಿ ವಿದ್ಯಾರ್ಥಿನಿ ಮಧುಶ್ರೀ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ನಂತರ ರಸಾಯನ ಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಓಝೋನ್ ದಿನದ ಅಂಗವಾಗಿ ಸಮುದಾಯ ಜಾಗೃತಿ ಅಭಿಯಾನ ನಡೆಸಿದರು. ಮನೆ ಮನೆಗೆ ತೆರಳಿ ಓಝೋನ್ ಪದರದ ಮಹತ್ವ ತಿಳಿಸಿ,ಸ್ಥಳೀಯರಲ್ಲಿ ಜಾಗೃತಿ ಮೂಡಿಸಿದರು.