ಧರ್ಮಸ್ಥಳದ ವತಿಯಿಂದ ಹಲವು ಸಮಾಜಮುಖಿ ಸೇವಾಕಾರ್ಯಗಳನ್ನು ಸದ್ಯದಲ್ಲೆ ಪ್ರಾರಂಭಿಸಲಾಗುವುದು: ಡಿ. ವೀರೇಂದ್ರ ಹೆಗ್ಗಡೆ
ಧರ್ಮಸ್ಥಳದಲ್ಲಿ ಸತ್ಯದರ್ಶನ ಸಮಾವೇಶ
ಎಲ್ಲರೂ ನಿಮ್ಮ ಮನೆಯ ಹಾಗೂ ಗ್ರಾಮದ ಕಲ್ಯಾಣದ ಬಗ್ಗೆಯೂ ಪ್ರಾರ್ಥನೆ ಮಾಡಿಕೊಳ್ಳಿ. ಎಲ್ಲರಿಗೂ ಶುಭವಾಗಲಿ, ಭವಿಷ್ಯ ಉಜ್ವಲವಾಗಿ ಸುಖ-ಶಾಂತಿ, ನೆಮ್ಮದಿಯಿಂದ ಜೀವನ ನಡೆಸುವಂತಾಗಲಿ ಎಂದು ಹೆಗ್ಗಡೆಯವರು ಶುಭ ಹಾರೈಸಿದರು. ಸತ್ಯದರ್ಶನ ಸಮಾವೇಶದಿಂದ ತಮಗೆ ಸಂತೋಷ ಮತ್ತು ತೃಪ್ತಿ ಉಂಟಾಗಿದೆ ಎಂದರು.
ಡಾ. ಪ್ರದೀಪ್ ನಾವೂರು ಮಾತನಾಡಿ, ದೇವರು ತನ್ನ ಪ್ರಿಯ ಭಕ್ತರ ಮೂಲಕ ಎಲ್ಲಾ ಲೋಕಕಲ್ಯಾಣ ಕಾರ್ಯಗಳನ್ನು ಮಾಡಿಸುತ್ತಾರೆ. ಅದೇ ರೀತಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಶ್ರೀ ಮಂಜುನಾಥ ಸ್ವಾಮಿ, ಧರ್ಮದೇವತೆಗಳು ಹಾಗೂ ಅಣ್ಣಪ್ಪ ಸ್ವಾಮಿಯ ಅನುಗ್ರಹದೊಂದಿಗೆ ತಮ್ಮ ಕರ್ತವ್ಯ ಮತ್ತು ಧರ್ಮದ ನೆಲೆಯಲ್ಲಿ ಶ್ರದ್ಧಾ-ಭಕ್ತಿಯಿಂದ ಲೋಕಕಲ್ಯಾಣ ಕಾರ್ಯಗಳನ್ನು ನಿರಂತರ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿ ಗೌರವಪೂರ್ವಕವಾಗಿ ಅಭಿನಂದಿಸಿದರು.
ಸತ್ಯದರ್ಶನ ಸಮಾವೇಶದ ಸಂಚಾಲಕ ಬೆಳ್ತಂಗಡಿಯ ವಕೀಲ ಸುಬ್ರಹ್ಮಣ್ಯ ಅಗರ್ತ ಸರ್ವರನ್ನೂ ಸ್ವಾಗತಿಸಿ ಸತ್ಯ, ಧರ್ಮ, ನ್ಯಾಯ, ನೀತಿ ಸದಾ ನೆಲೆ ನಿಂತಿರುವ ಪವಿತ್ರಕ್ಷೇತ್ರ ಧರ್ಮಸ್ಥಳದ ಪಾವಿತ್ರ್ಯ ರಕ್ಷಣೆಗೆ ಇಡೀ ತಾಲ್ಲೂಕಿನ ಎಲ್ಲಾ ಜನತೆ ಸದಾ ಕಟಿಬದ್ಧರಾಗಿರುವುದಾಗಿ ಭರವಸೆ ನೀಡಿದರು. ಅಪಪ್ರಚಾರ ಹಾಗೂ ಭ್ರಮೆಯನ್ನು ಸೃಷ್ಟಿಸಿದ ಗೊಂದಲಗಳ ನಿವಾರಣೆಯಾಗುತ್ತಿದ್ದು ಸತ್ಯದ ಸಾಕ್ಷಾತ್ಕಾರವಾಗುತ್ತಿದೆ. ಇಡೀ ಬೆಳ್ತಂಗಡಿ ತಾಲ್ಲೂಕಿನ ಜನರಿಗೆ ತಾಲ್ಲೂಕೇ ಮನೆಯಾಗಿದ್ದು ಧರ್ಮಸ್ಥಳ ದೇವರ ಕೋಣೆಯಾಗಿದೆ. ಹೆಗ್ಗಡೆಯವರೆ ಇಡೀ ಕುಟುಂಬದ ಯಜಮಾನರಾಗಿದ್ದು ಅವರೊಬ್ಬ ‘ಶ್ರೇಷ್ಠ ಸಾಮಾಜಿಕ ಸಂತ’ ಎಂದು ಬಣ್ಣಿಸಿದರು. ಬೆಳ್ತಂಗಡಿ ತಾಲ್ಲೂಕಿನ ಸಮಸ್ತರು ಧರ್ಮಸ್ಥಳದ ರಾಯಭಾರಿಗಳಾಗಿ ಧರ್ಮಕ್ಷೇತ್ರದ ಸೇವೆ ಮಾಡುವುದಾಗಿ ಅವರು ಭರವಸೆ ನೀಡಿದರು.
ಹೇಮಾವತಿ ವೀ. ಹೆಗ್ಗಡೆ, ಡಿ. ಸುರೇಂದ್ರಕುಮಾರ್, ಅನಿತಾ ಸುರೇಂದ್ರಕುಮಾರ್, ಡಿ. ಹರ್ಷೇಂದ್ರಕುಮಾರ್, ಸುಪ್ರಿಯಾ ಹರ್ಷೇಂದ್ರಕುಮಾರ್, ಶ್ರದ್ಧಾ ಅಮಿತ್ ಮತ್ತು ಮೈತ್ರಿ ನಂದೀಶ್ ಉಪಸ್ಥಿತರಿದ್ದರು.
ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ಉಜಿರೆಯ ಜನಾರ್ದನಸ್ವಾಮಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡ್ವೆಟ್ನಾಯ, ಶಶಿಧರ ಶೆಟ್ಟಿ ಬರೋಡಾ, ಜನಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷ ಕೆ. ವಸಂತ ಸಾಲಿಯಾನ್ ಮೊದಲಾದವರು ಸಮಾರಂಭದಲ್ಲಿ ಭಾಗವಹಿಸಿದರು.
ಉಜಿರೆಯ ವರ್ತಕರ ಸಂಘದ ಅಧ್ಯಕ್ಷ ಪ್ರಸಾದ್ ಬಿ.ಎಸ್. ವಂದಿಸಿದರು. ಉಜಿರೆಯ ಎಸ್.ಡಿ.ಎಂ. ಸ್ವಾಯತ್ತ ಕಾಲೇಜಿನ ಉಪನ್ಯಾಸಕ ಪ್ರೊ. ಸುವೀರ್ ಜೈನ್ ನೆಲ್ಲಿಕಾರು ಕಾರ್ಯಕ್ರಮ ನಿರ್ವಹಿಸಿದರು.
ಸಮಾವೇಶಕ್ಕೆ ಪೂರ್ವಭಾವಿಯಾಗಿ ಧರ್ಮಸ್ಥಳದ ದೇವಸ್ಥಾನದ ಅರ್ಚಕ ರಾಮಕೃಷ್ಣ ಕಲ್ಲೂರಾಯರ ನೇತೃತ್ವದಲ್ಲಿ ಚಂಡಿಕಾಹೋಮ ನಡೆಸಲಾಯಿತು. ಪೂರ್ಣಾಹುತಿ ಸಂದರ್ಭದಲ್ಲಿ ಹೆಗ್ಗಡೆಯವರು ಮತ್ತು ಕುಟುಂಬದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.





