ಕಡಿರುದ್ಯಾವರದಲ್ಲಿ ಕಾಡಾನೆ ಕಾಟ: ಅಪಾರ ಕೃಷಿ ಹಾನಿ
ಜೋರ್ಜ್ ಟಿ.ವಿ. ಅವರ ತೋಟಕ್ಕೆ ಮರಿಯಾನೆ ಸಹಿತ ಮೂರು ಆನೆಗಳು ರಾತ್ರಿ ನುಗ್ಗಿ ಸುಮಾರು 100ಕ್ಕಿಂತ ಅಧಿಕ ಅಡಕೆ ಗಿಡಗಳನ್ನು ಮುರಿದು ಹಾಕಿ, 7 ಜೇನು ಪೆಟ್ಟಿಗೆಗಳನ್ನು ಮಗುಚಿ ಹಾಕಿವೆ. ಆನೆಗಳು ಬಂದ ದಾರಿಯಲ್ಲಿದ್ದ ಪಂಪುಸೆಟ್ಟನ್ನು ದೂಡಿ ಹಾಕಿ ಹಾನಿ ಮಾಡಿವೆ.
ಅಲ್ಲಿಂದ ಎರಡು ಕಿ.ಮೀ. ದೂರದ ಮುಂಡಾಜೆಯ ಕಾಪು ಎಂಬಲ್ಲಿ ಸೋಮವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಒಂಟಿ ಸಲಗವೊಂದು ಕಂಡುಬಂದಿತ್ತು. ಅದನ್ನು ಅರಣ್ಯ ಇಲಾಖೆ ಹಾಗೂ ಸ್ಥಳೀಯರು ಸೇರಿ ಕಾಡಿಗೆ ಅಟ್ಟಿದ್ದರು. ಇದು ಈ ಹಿಂಡಿನ ಆನೆ ಆಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಮರಿಯಾನೆ ಸಹಿತ ಮೂರು ಆನೆಗಳ ಹಿಂಡು ಕಡಿರುದ್ಯಾವರ, ಮುಂಡಾಜೆ, ಚಿಬಿದ್ರೆ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಮರಿಯಾನೆ ಸಹಿತ ಹಿಂಡು ಆಗಾಗ ಕಂಡು ಬರುತ್ತಿದ್ದು ಕಳೆದ ಕೆಲವು ವರ್ಷಗಳಿಂದ ಭಾರಿ ಪ್ರಮಾಣದ ಕೃಷಿಯನ್ನು ಹಾನಿಗೊಳಿಸಿವೆ.
ಅಲ್ಲದೆ ಅಲ್ಲಿ ಒಂಟಿ ಸಲಗದ ಹಾವಳಿಯೂ ಇದೆ ಎನ್ನಲಾಗಿದೆ. ಸಮೀಪದ ಚಾರ್ಮಾಡಿ ಗ್ರಾಮದಲ್ಲಿ 5 ಆನೆಗಳ ಹಿಂಡು ಆಗಾಗ ಕೃಷಿ ತೋಟಗಳಲ್ಲಿ ಸಂಚರಿಸುತ್ತಿರುತ್ತದೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.