ಅಭಾಸಾಪ ವತಿಯಿಂದ ಡಾ. ಎಸ್.ಎಲ್. ಭೈರಪ್ಪ ಅವರಿಗೆ ನುಡಿನಮನ

ಅಭಾಸಾಪ ವತಿಯಿಂದ ಡಾ. ಎಸ್.ಎಲ್. ಭೈರಪ್ಪ ಅವರಿಗೆ ನುಡಿನಮನ


ಉಜಿರೆ: ಡಾ. ಎಸ್.ಎಲ್. ಭೈರಪ್ಪ ಅವರು ತನ್ನ ಬರವಣಿಗೆಯ ಮೂಲಕ ಪ್ರಜ್ವಲಿಸಿ ಎತ್ತರಕ್ಕೆ ಏರಿದವರು. ಅವರು ಯಾವುದೇ ಪ್ರಶಸ್ತಿಗಳ ಹಿಂದೆ  ಹೋಗದೆ ಅಪಾರ ಪ್ರಮಾಣದ ಓದುಗ ಬಳಗವನ್ನು ಸೃಷ್ಟಿಸಿದ್ದಾರೆ. ಅವರು ಯಾವುದೇ ವಾಗ್ವಾದ, ವಿವಾದಗಳಿಂದ ದೂರ ಉಳಿದ ಮೇರು ವ್ಯಕ್ತಿ. ಅವರ ಕೃತಿಗಳು ಕಣ್ಣಿಗೆ ಕಟ್ಟುವಂತಿದ್ದು, ತಾನಾಗಿ ಓದಿಸಿಕೊಂಡು ಹೋಗುತ್ತದೆ ಎಂದು ಶಿವಪ್ರಸಾದ ಸುರ್ಯ ಹೇಳಿದರು.

ಅವರು ಸೆ.25 ರಂದು ಉಜಿರೆ ಶ್ರೀ ಶಾರದಾ ಮಂಟಪದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಬೆಳ್ತಂಗಡಿ ತಾಲೂಕು ಸಮಿತಿ ವತಿಯಿಂದ ಇತ್ತೀಚಿಗೆ ನಿಧನರಾದ ಖ್ಯಾತ ಸಾಹಿತಿ, ಪದ್ಮಭೂಷಣ ಪುರಸ್ಕೃತ ಡಾ. ಎಸ್.ಎಲ್. ಭೈರಪ್ಪ ಅವರಿಗೆ ನುಡಿನಮನ ಸಲ್ಲಿಸಿ ಮಾತನಾಡಿದರು.

ಅವರ ಪ್ರತಿ ಕೃತಿಗಳು ಓದುಗರಿಗೆ ಓದಿನ ಹುಚ್ಚು ಹಿಡಿಸುವಂತಿದೆ. ಅವರ ವಂಶವೃಕ್ಷ ಕಾದಂಬರಿಯ ನಂಜುಂಡನ ಪಾತ್ರ ಕುತೂಹಲ ಹಾಗೂ ತಲ್ಲಣಗೊಳಿಸಿದೆ. ತಬ್ಬಲಿಯು ನೀನಾದೆ ಮಗನೆ ಕೃತಿಯನ್ನು ರಾತ್ರಿ ಓದಿದಾಗ ಪುಣ್ಯಕೋಟಿಯ ಕಥೆ ಕಣ್ಣೀರು ತರಿಸಿದೆ. ದಾಟು ಕೃತಿಯ ಸತ್ಯಭಾಮ ಪಾತ್ರಕ್ಕೆ ಜನಿವಾರ ಹಾಕುವ ಪ್ರಸಂಗ  ಪ್ರಭಾವಶಾಲಿ. ಅವರು ತನಗೆ ದೊರೆತ ಸಂಭಾವನೆಯನ್ನು ಬಡ ಮಕ್ಕಳ ಶಿಕ್ಷಣಕ್ಕೆ ವಿನಿಯೋಗಿಸುತ್ತಿದ್ದರು. ಅವರು ಬಿಟ್ಟುಹೋದ ವಸ್ತುಗಳೆಂದರೆ ಅಪಾರ ಪುಸ್ತಕಗಳು. ‘ಭಿತ್ತಿ’ ಅವರ ಜೀವನ ಚರಿತ್ರೆ ಹೆಜ್ಜೆ ಹೆಜ್ಜೆಗೂ ಅವರ ಜೀವನಾನುಭಗಳನ್ನು ತೆರೆದಿಡುತ್ತಿದ್ದು, ಓದಲೇ ಬೇಕಾದ ಕೃತಿಯಾಗಿದೆ. ಅವರ ‘ಪರ್ವ’ ಕಾದಂಬರಿ ಕನ್ನಡದ ಮೇಘದೂತ ಎಂದು ಶತಾವಧಾನಿ ಡಾ. ಆರ್. ಗಣೇಶ್ ವ್ಯಾಖ್ಯಾನಿಸಿದ್ದರು ಎಂದು ನುಡಿನಮನ ಸಲ್ಲಿಸಿದರು. 

ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಡಾ. ಎಸ್.ಎಲ್. ಭೈರಪ್ಪ ಅವರನ್ನು ಭೇಟಿಯಾಗಿ ಅರೋಗ್ಯ ವಿಚಾರಿಸಿದ ಕುರಿತು ಅವರು ತಮ್ಮ ಕೊನೆಯ ಭೇಟಿಯನ್ನು ಸ್ಮರಿಸಿಕೊಂಡರು.

ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಬೆಳ್ತಂಗಡಿ ತಾಲೂಕು ಸಮಿತಿ ಅಧ್ಯಕ್ಷ ಪ್ರೊ. ಗಣಪತಿ ಭಟ್ ಕುಳಮರ್ವ ಸ್ವಾಗತಿಸಿ, ಪ್ರಸ್ತಾವಿಸಿ, ಡಾ. ಭೈರಪ್ಪ ಅವರು ಸರಳ,ಸಜ್ಜನಿಕೆಯ ಮಾನವತಾವಾದಿ ವೇದಾಂತಿ, ನೇರ ನಡೆನುಡಿಯ ವ್ಯಕ್ತಿತ್ವದವರು.

ಪುತ್ತೂರು ವಿವೇಕಾನಂದ ಕಾಲೇಜಿನ ಕನ್ನಡ ವಿಭಾಗದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಧುರ ಕ್ಷಣವನ್ನು ಸ್ಮರಿಸಿಕೊಂಡು ಭೈರಪ್ಪ ಅವರು ಅಲ್ಲಿ ತನಗೆ ದೊರೆತ ಸಂಭಾವನೆಯನ್ನು ವಿಟ್ಲಕ್ಕೆ ತೆರಳಿ ತನ್ನ ತಾಯಿಗೆ ಅರ್ಪಿಸಿದರೆಂದು ನೆನಪಿಸಿಕೊಂಡರು. ಭೈರಪ್ಪ ಅವರ ಆದರ್ಶ ಆದರಣೀಯ, ಅನುಸರಣೀಯ ಹಾಗೂ ಅನುಕರಣೀಯವೆಂದರು.

ಡಾ. ಎಸ್.ಎಲ್. ಭೈರಪ್ಪ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರ ದಿವ್ಯಾತ್ಮಕ್ಕೆ ಶಾಂತಿ ಕೋರಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಅಭಾಸಾಪ ವಿಭಾಗ ಸಂಯೋಜಕ ಸುಂದರ ಶೆಟ್ಟಿ, ರವೀಂದ್ರ ಶೆಟ್ಟಿ ಬಳಂಜ, ರಘುನಾಥ ಪ್ರಭು, ಕೇಶವ ಭಟ್ ಅತ್ತಾಜೆ, ಶಾಮ ಭಟ್ ಅತ್ತಾಜೆ, ರಮೇಶ್ ಮಯ್ಯ, ಡಾ. ರಾಜಶೇಖರ,  ವಿನಯಚಂದ್ರ, ವಿನುತಾ ರಜತ್ ಗೌಡ ಹಾಗು ಅಭಾಸಾಪ ಸದಸ್ಯರು ಹಾಗೂ ಸಾಹಿತ್ಯಾಭಿಮಾನಿಗಳು ಭಾಗವಹಿಸಿದ್ದರು.

ಅಭಾಸಾಪ ಬೆಳ್ತಂಗಡಿ ತಾಲೂಕು ಸಮಿತಿ ಕಾರ್ಯದರ್ಶಿ ಸುಭಾಷಿಣಿ ಕಾರ್ಯಕ್ರಮವನ್ನು ನಿರೂಪಿಸಿದರು. ಉಪಾಧ್ಯಕ್ಷ ರಾಮಕೃಷ್ಣ ಭಟ್ ಉಜಿರೆ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article