ದಾರಿದೀಪ ಖರೀದಿಗೆ 15 ಲಕ್ಷ ಅನುದಾನ ಮೀಸಲಿಟ್ಟ ಟೆಂಡರ್‌ಗೆ ಆಕ್ಷೇಪ

ದಾರಿದೀಪ ಖರೀದಿಗೆ 15 ಲಕ್ಷ ಅನುದಾನ ಮೀಸಲಿಟ್ಟ ಟೆಂಡರ್‌ಗೆ ಆಕ್ಷೇಪ


ಉಳ್ಳಾಲ: ಹೊಸ ದಾರಿದೀಪ ಖರೀದಿಗೆ 15 ಲಕ್ಷ ಅನುದಾನ ಮೀಸಲಿಟ್ಟು ಟೆಂಡರ್‌ಗೆ ಆಹ್ವಾನ ನೀಡಿದ ವಿಚಾರದಲ್ಲಿ ಪರ ವಿರೋಧ ಚರ್ಚೆಗಳು ಕೋಟೆಕಾರ್ ಪಟ್ಟಣ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನಡೆಯಿತು.

ಕೋಟೆಕಾರ್ ಪಟ್ಟಣ ಪಂಚಾಯತ್ ಅಧ್ಯಕ್ಷೆ ದಿವ್ಯ ಸತೀಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೌನ್ಸಿಲರ್ ಧೀರಜ್ ಮಾತನಾಡಿ, ಹೊಸ ದಾರಿದೀಪ ಖರೀದಿಗೆ ೧೫ ಲಕ್ಷ ಅನುದಾನ ಮೀಸಲಿಟ್ಟು ಟೆಂಡರ್ ಕರೆದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರಲ್ಲದೇ ಅಷ್ಟು ಮೊತ್ತದ ಬಜೆಟ್ ದಾರಿದೀಪ ಖರೀದಿಗೆ ಬೇಕೇ ಎಂದು ಪ್ರಶ್ನಿಸಿದರು.

ಸುಜಿತ್ ಮಾಡೂರು ಮಾತನಾಡಿ, ಟ್ಯೂಬ್ ಲೈಟ್ ಮಾತ್ರ ಖರೀದಿ ಮಾಡಿದರೆ ಸಾಕಾಗುತ್ತದೆ. ಅದಕ್ಕೆ ಬೇಕಾದ ಪರಿಕರಗಳು ನಮಲ್ಲಿ ಇರುವಾಗ ಅಷ್ಟು ಮೊತ್ತದ ಅಗತ್ಯ ಇಲ್ಲ ಎಂದರು.

ಅಹ್ಮದ್ ಬಾವ ಮಾತನಾಡಿ ಕಡಿಮೆ ಮೊತ್ತದಲ್ಲಿ ಆಗುವುದಾದರೆ 15 ಲಕ್ಷ ಅನುದಾನದ ಟೆಂಡರ್ ಬೇಕಾಗಿಲ್ಲ ಎಂದರು.

ಅಧ್ಯಕ್ಷೆ ದಿವ್ಯ ಸತೀಶ್ ಮಾತನಾಡಿ, ಹೊಸ ದಾರಿದೀಪ ಖರೀದಿಗೆ ಟೆಂಡರ್ ಕರೆದಿದ್ದು ಮಾತ್ರ. ಯಾರಿಗೂ ನೀಡಿಲ್ಲ. ಈ ಟೆಂಡರ್ ಬೇಡ ಎಂದಾದಲ್ಲಿ ರದ್ದು ಪಡಿಸಲಾಗುವುದು ಎಂದರು.

ಕೋಟೆಕಾರ್ ಪಟ್ಟಣ ಪಂಚಾಯತ್‌ನ 17 ವಾರ್ಡ್‌ಗಳಿಗೆ ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಮೀಸಲಿಡಬೇಕು. ಅಮೃತ್ 2.0 ಕುಡಿಯುವ ನೀರು ಯೋಜನೆಯಿಂದ ಪಂಚಾಯತ್‌ಗೆ ಕುಡಿಯುವ ನೀರಿನ ವಾರ್ಷಿಕ ನಿರ್ವಹಣಾ ಕಾಮಗಾರಿ ಯಲ್ಲಿ ಹಣ ಉಳಿಯುತ್ತದೆ. ಅದನ್ನು ವಾರ್ಡ್‌ಗಳ ಅಭಿವೃದ್ಧಿಗೆ ನೀಡಿ ಎಂದು ಧೀರಜ್ ತಿಳಿಸಿದರು.

11ನೇ ವಾರ್ಡ್ ತುಂಬಾ ಹಿಂದುಳಿದ ಪ್ರದೇಶ. ಈ ವಾರ್ಡ್‌ನಲ್ಲಿ ಅಭಿವೃದ್ಧಿ ಕೆಲಸ ಆಗಬೇಕು. ಈ ವಾರ್ಡ್‌ಗೆ ಜಾಸ್ತಿ ಅನುದಾನ ನೀಡಬೇಕು ಎಂದು ಹರೀಶ್ ಹೇಳಿದರು.

ಪ್ರತಿ ವಾರ್ಡ್‌ಗಳ ಅಭಿವೃದ್ಧಿ ಕೆಲಸಗಳ ಬಗ್ಗೆ ಸದಸ್ಯರು ಪಟ್ಟಿ ಮಾಡಿ ಒಂದು ವಾರದೊಳಗೆ ನೀಡಿದರೆ ಒಳ್ಳೆಯದು. ಇದರಿಂದ ಅಭಿವೃದ್ಧಿ ಕಾಮಗಾರಿಗೆ ಎಷ್ಟು ಹಣ ಬೇಕು ಎಂದು ಗೊತ್ತಾಗುತ್ತದೆ ಎಂದು ಅಹ್ಮದ್ ಅಜ್ಜಿನಡ್ಕ ತಿಳಿಸಿದರು.

ಅನುದಾನದಲ್ಲಿ ವೆತ್ಯಾಸ ಮಾಡಿ ನೀಡಲಾಗುವುದಿಲ್ಲ. ಎಲ್ಲರಿಗೂ ಸಮಾನ ರೀತಿಯಲ್ಲಿ ಅನುದಾನ ಹಂಚಲಾಗುವುದು ಎಂದು ಅಧ್ಯಕ್ಷೆ ದಿವ್ಯ ಸತೀಶ್ ಸಭೆಗೆ ತಿಳಿಸಿದರು.

ಸಂಕೋಲಿಗೆ ಬಳಿ ಮನೆಯೊಂದಕ್ಕೆ ವಿದ್ಯುತ್ ಸಂಪರ್ಕ ಇಲ್ಲ. ಅವರ ಜೀವನ ಕತ್ತಲಲ್ಲಿ ಇದೆ. ಇದಕ್ಕೆ ಒಂದು ಪರಿಹಾರ ಆಗಬೇಕು ಎಂದು ಸುಜಿತ್ ಅವರು ಮೆಸ್ಕಾಂ ಅಧಿಕಾರಿಯ ಗಮನ ಸೆಳೆದರು.

ಮೆಸ್ಕಾಂ ಅಧಿಕಾರಿ ಮಾರಪ್ಪ ಮಾತನಾಡಿ ಮೆಸ್ಕಾಂ ವತಿಯಿಂದ ನೇರವಾಗಿ ವಿದ್ಯುತ್ ಸಂಪರ್ಕ ಮನೆಗೆ ನೀಡಲಾಗುವುದಿಲ್ಲ. ಇದಕ್ಕೆ ಪಂಚಾಯತ್ ನ ಎನ್ ಒಸಿ, ಡೋರ್ ನಂಬರ್ ಬೇಕು. ಇದನ್ನು ಕೋಟೆಕಾರ್ ಪ.ಪಂ. ಮಾಡಿಸಬೇಕು ಎಂದರು.

ಕೋಟೆಕಾರ್ ಗ್ರಾಮ ವ್ಯಾಪ್ತಿಯಲ್ಲಿ ಪೆಟ್ರೋಲ್, ಹೈಸ್ಪೀಡ್ ಡೀಸೆಲ್ ರಿಟೇಲ್ ಔಟ್ ಲೆಟ್ ಸ್ಥಾಪಿಸಲು ನಿರಾಕ್ಷೇಪಣಾ ಪತ್ರ ನೀಡುವ ಬಗ್ಗೆ ಹಾಗೂ ಕಚೇರಿಗೆ ಲ್ಯಾಪ್ ಟಾಪ್, ಸ್ಕ್ಯಾನರ್ ಖರೀದಿ ವಿಚಾರದಲ್ಲಿ ಮುಖ್ಯಾಧಿಕಾರಿ ಮಾಲಿನಿ ಪ್ರಸ್ತಾಪಿಸಿದಾಗ ಸಭೆಯಲ್ಲಿ ಸಹಮತ ವ್ಯಕ್ತವಾಯಿತು.

ಹೊಂಡಮಯ ರಸ್ತೆಯಲ್ಲಿ ಹೊಂಡಗಳನ್ನು ಮುಚ್ಚುವ ಕಾರ್ಯ ಮಾಡಿದರೂ ಕಾಮಗಾರಿ ಕಳಪೆ ಆಗಿದೆ. ಇದನ್ನು ಮರು ದುರಸ್ತಿ ಮಾಡಿಸಬೇಕು ಎಂದು ಸದಸ್ಯರು ಸಭೆಯಲ್ಲಿ ಆಗ್ರಹಿಸಿದರು.

ಮುಖ್ಯಾಧಿಕಾರಿ ಮಾಲಿನಿ ಅವರು ಈಗ ತಾತ್ಕಾಲಿಕ ಮಟ್ಟಕ್ಕೆ ಮಳೆಯ ನಡುವೆ ಹೊಂಡಮಯ ರಸ್ತೆಯ ಗುಂಡಿ ಮುಚ್ಚುವ ಕಾಮಗಾರಿ ಮಾಡಲಾಗಿದೆ. ಇದನ್ನು ಮರು ದುರಸ್ತಿ ಮುಂದಿನ ಹಂತದಲ್ಲಿ ನಡೆಯಲಿದೆ ಎಂದರು.

ಉಪಾಧ್ಯಕ್ಷ ಪ್ರವೀಣ್, ಸ್ಥಾಯಿ ಸಮಿತಿ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article