ಸೌದಿಯಲ್ಲಿ ರಸ್ತೆ ಅಪಘಾತ: ಮಿಲ್ಲತ್ ನಗರ ನಿವಾಸಿ ಮೃತ್ಯು
ಮೃತರನ್ನು ಮಿಲ್ಲತ್ ನಗರ ನಿವಾಸಿ ಮೊಹಮ್ಮದ್ ಅವರ ಪುತ್ರ ಅಬ್ದುಲ್ ರಾಝಿಕ್ (27) ಎಂದು ಗುರುತಿಸಲಾಗಿದೆ.
ಅವರು ಕೆಲಸದ ನಿಮಿತ್ತ ಬಸ್‌ನಲ್ಲಿ ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಮೊಹಮ್ಮದ್ ಅವರ ಕೊನೆಯ ಪುತ್ರ ಆಗಿರುವ ರಾಝಿಕ್ ಸಿವಿಲ್ ಇಂಜಿನಿಯರ್ ಕೋರ್ಸ್ ಪಡೆದ ಬಳಿಕ ವಿದೇಶಕ್ಕೆ ತೆರಳಿದ್ದರು. ಜುಬೈಲ್‌ನಲ್ಲಿ ಪೋಲಿಟೆಕ್ ಕಂಪೆನಿಯಲ್ಲಿ ಉದ್ಯೋಗ ಪಡೆದುಕೊಂಡ ಅವರು ಕಳೆದ ಜುಲೈ 11 ರಂದು ಊರಿಗೆ ಬಂದಿದ್ದರು. ಒಂದು ತಿಂಗಳ ರಜೆ ಮುಗಿಸಿ ಆಗಸ್ಟ್ 15 ರಂದು ಎರಡನೇ ಬಾರಿ ವಿದೇಶಕ್ಕೆ ತೆರಳಿದ್ದರು.
ಸೌದಿ ಅರೇಬಿಯಾದ ಪೋಲಿಟೆಕ್ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದ ಅವರು ಸೆ.14 ರಂದು ಸಂಜೆ ರಾತ್ರಿ ಪಾಳಿ ಕೆಲಸಕ್ಕೆಂದು ಬಸ್‌ನಲ್ಲಿ ತೆರಳುತ್ತಿದ್ದಾಗ ರಸ್ತೆ ಅಪಘಾತ ಸಂಭವಿಸಿದೆ. ಇವರು ಸಂಚರಿಸುತ್ತಿದ್ದ ಬಸ್‌ಗೆ ಇನ್ನೊಂದು ಬಸ್ ಢಿಕ್ಕಿ ಹೊಡೆದಿದೆ. ಇದರ ಪರಿಣಾಮವಾಗಿ ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ರಾಝಿಕ್ ಅವರ ಓರ್ವ ಸಹೋದರ ಹಾಗೂ ಓರ್ವ ಸಹೋದರಿ ಅನಾರೋಗ್ಯ ನಿಮಿತ್ತ ಈ ಹಿಂದೆ ಮೃತಪಟ್ಟಿದ್ದರು ಎಂದು ಕುಟುಂಬದಸ್ಥರು ತಿಳಿಸಿದ್ದಾರೆ.
ಮೃತರು ತಂದೆ, ತಾಯಿ, ಮೂವರು ಸಹೋದರಿ, ಒಬ್ಬ ಸಹೋದರ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.