ರಸ್ತೆ ದುರಸ್ಥಿಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ
ರಸ್ತೆ ಹೊಂಡಗಳ ವಿರುದ್ಧ ಹಾಗೂ ರಸ್ತೆ ದುರಸ್ಥಿಗೆ ಆಗ್ರಹಿಸಿ ಭಾರತೀಯ ಜನತಾ ಪಾರ್ಟಿ ಮಂಗಳೂರು ವಿಧಾನಸಭಾ ಕ್ಷೇತ್ರ ವತಿಯಿಂದ ಕೋಟೆಕಾರು ಬೀರಿಯಲ್ಲಿ ಬುಧವಾರದಂದು ನಡೆದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಗ್ರಹಚಾರ ಹಿಡಿದ ಸರಕಾರ ಆಡಳಿತ ನಡೆಸುತ್ತಿದೆ. ನಾನಾ ರೀತಿಯ ತೆರಿಗೆ ವಸೂಲಿಯ ಮೂಲಕ ಜನಸಾಮಾನ್ಯರ ರಕ್ತ ಹಿಂಡುತ್ತಿರುವ ಯಾವುದೇ ಗ್ಯಾರಂಟಿ ಇಲ್ಲದ ಸರಕಾರ ಇದಾಗಿದೆ. ಕಳೆದ ಐದು ತಿಂಗಳುಗಳಿಂದ ಜಿಲ್ಲೆಯಲ್ಲಿ ಕೆಂಪು ಕಲ್ಲು, ಮರಳು ಸಿಗದಂತೆ ಮಾಡಿ ಕಾರ್ಮಿಕರನ್ನ ತೊಂದರೆಗೀಡು ಮಾಡಿರುವ ಸರಕಾರವು ಕೆಂಪು ಕಲ್ಲು ಮತ್ತು ಮರಳು ಸಾಗಾಟದ ನೀತಿಯನ್ನ ಸರಳೀಕರಣಗೊಳಿಸಲು ನಾಳೆ, ನಾಡಿದ್ದೆಂದು ದಿನದೂಡುತ್ತಿದೆ ಹೊರತು ಸಮಸ್ಯೆಯನ್ನ ಬಗೆಹರಿಸಿಲ್ಲ. ಬಿಜೆಪಿ ಸರಕಾರ ಇದ್ದಾಗ ೩ಎ ಮುಖಾಂತರ ಕೆಂಪು ಕಲ್ಲು ಸಾಗಾಟದ ಕಾನೂನನ್ನ ಸರಳೀಕರಣ ಮಾಡಿತ್ತು. ಮರಳು ನೀತಿಯನ್ನೂ ಸಹ ಸಡಿಲಗೊಳಿಸಿತ್ತು. ಕೆಂಪು ಕಲ್ಲಿಲ್ಲದೆ ಕಟ್ಟಡ ನಿರ್ಮಾಣ ಕಾಮಗಾರಿ ನಿಂತಿರುವ ಪರಿಣಾಮ ಕಾರ್ಮಿಕ ವರ್ಗಕ್ಕೆ ಮಾತ್ರವಲ್ಲದೆ, ಸಣ್ಣ ವ್ಯಾಪಾರಸ್ಥರಿಗೂ ಆರ್ಥಿಕ ಹೊಡೆತ ಬಿದ್ದಿದೆ.
ಸರಕಾರವು ಜಾತಿಗಣತಿಗೆ ಹೊರಟದ್ದು ಜನಸಾಮಾನ್ಯರಿಗೆ ಸಿಗುವ ಸವಲತ್ತುಗಳನ್ನ ಕಡಿತಗೊಳಿಸಲಿಕ್ಕಾಗಿಯೇ ಹೊರತು ಯಾರನ್ನೂ ಉದ್ಧಾರ ಮಾಡಲಿಕ್ಕಲ್ಲ. ಸ್ಥಳೀಯ ಮಾಡೂರಿನ ರಸ್ತೆ ಸರಿಪಡಿಸಲು ಸರಕಾರದಲ್ಲಿ ಹಣ ಇಲ್ಲದಂತಾಗಿದೆ. ಸಮಸ್ಯೆಯನ್ನ ಸರಿಪಡಿಸಬೇಕಿದ್ದ ಲೋಕೋಪಯೋಗಿ ಅಧಿಕಾರಿಗಳು ಅಸಹಾಯಕರಾಗಿದ್ದಾರೆ. ಪಕ್ಕದ ಕೇರಳದಿಂದ ಆಂಬ್ಯುಲೆನ್ಸಲ್ಲಿ ಬರುವ ರೋಗಿಗಳು ರಸ್ತೆ ಗುಂಡಿಗಳಿಂದಾಗಿ ಆಸ್ಪತ್ರೆಗೆ ಜೀವಂತವಾಗಿ ತಲುಪುವ ಗ್ಯಾರಂಟಿಯೂ ಇಲ್ಲದಂತಾಗಿದೆ ಎಂದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ದಿನೇಶ್ ಅಮ್ಟೂರ್, ಮಂಗಳೂರು ಮಂಡಲ ಅಧ್ಯಕ್ಷ ಜಗದೀಶ್ ಆಳ್ವ ಕುವೆತ್ತಬೈಲ್, ದಿ.ಮೈಸೂರು ಇಲೆಕ್ಟ್ರಿಕಲ್ಸ್ ಲಿಮಿಟೆಡ್ನ ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರು ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು.
ಬಿಜೆಪಿ ಮಂಡಲ ಉಪಾಧ್ಯಕ್ಷ ಸುರೇಶ್ ಆಳ್ವ ಸಾಂತ್ಯಗುತ್ತು, ಕೋಟೆಕಾರು ಪ.ಪಂ. ಅಧ್ಯಕ್ಷ ದಿವ್ಯಾ ಸತೀಶ್ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ,ಸದಸ್ಯರಾದ ಸುಜಿತ್ ಮಾಡೂರು, ಸೋಮೇಶ್ವರ ಪುರಸಭಾ ಅಧ್ಯಕ್ಷರಾದ ಕಮಲ, ಉಪಾಧ್ಯಕ್ಷ ರವಿಶಂಕರ್ ಸೋಮೇಶ್ವರ, ಸ್ಥಾಯಿ ಸಮಿತಿ ಅಧ್ಯಕ್ಷ ಪುರುಷೋತ್ತಮ ಗಟ್ಟಿ, ಬಿಜೆಪಿ ಮಹಿಳಾ ಮೋರ್ಚದ ಮಂಡಲ ಅಧ್ಯಕ್ಷೆ ಮಾಧವಿ ಉಳ್ಳಾಲ್, ಯುವ ಮೋರ್ಚದ ಜಿಲ್ಲಾ ಉಪಾಧ್ಯಕ್ಷ ನಿಶಾಂತ್ ಪೂಜಾರಿ, ಮಂಡಲ ಅಧ್ಯಕ್ಷ ಮುರಳಿ ಕೊಣಾಜೆ, ಪ್ರಮುಖರಾದ ಸುಮಲತಾ ಕೊಣಾಜೆ, ಯಶವಂತ ಆಳ್ವ ಮತ್ತಿತರರು ಉಪಸ್ಥಿತರಿದ್ದರು.