ಕರ್ನಾಟಕ ಗ್ರಾಮೀಣ ಬ್ಯಾಂಕಿಗೆ ನಿರ್ಮಲಾ ಸೀತಾರಾಮನ್ ಭೇಟಿ

ಕರ್ನಾಟಕ ಗ್ರಾಮೀಣ ಬ್ಯಾಂಕಿಗೆ ನಿರ್ಮಲಾ ಸೀತಾರಾಮನ್ ಭೇಟಿ


ಬಳ್ಳಾರಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಬಳ್ಳಾರಿಯಲ್ಲಿನ ಕರ್ನಾಟಕ ಗ್ರಾಮೀಣ ಬ್ಯಾಂಕಿನ ಪ್ರಧಾನ ಕಚೇರಿಗೆ ಭೇಟಿ ನೀಡಿ ಬ್ಯಾಂಕಿನ ಪ್ರಗತಿ ಪರಿಶೀಲನೆ ಮಾಡಿದರು. 

ಒಂದು ರಾಜ್ಯ ಒಂದು ಗ್ರಾಮೀಣ ಬ್ಯಾಂಕ್ ಪ್ರಕ್ರಿಯೆ ಅಡಿಯಲ್ಲಿ ಮೇ.1 ರಿಂದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಅಸ್ತಿತ್ವಕ್ಕೆ ಬಂದಿದ್ದು ಈ ಬ್ಯಾಂಕು ದೇಶದ 3ನೇ ಅತಿ ದೊಡ್ಡ ಗ್ರಾಮೀಣ ಬ್ಯಾಂಕಾಗಿದೆ. ಪ್ರಸ್ತುತ ಬ್ಯಾಂಕು ಬಳ್ಳಾರಿಯಲ್ಲಿ ಪ್ರಧಾನ ಕಚೇರಿಯನ್ನು ಹೊಂಡಿದ್ದು 1750 ಶಾಖೆಗಳೊಂದಿಗೆ 1,04,364 ಕೋಟಿ ರೂ. ವಹಿವಾಟು ಮಾಡುತ್ತಲಿದೆ. ದೇಶದ 28 ಗ್ರಾಮೀಣ ಬ್ಯಾಂಕುಗಳು ತಮ್ಮ 50ನೇ ವರ್ಷದ ಸಂದರ್ಭದಲ್ಲಿರುವಾಗ ಕೇಂದ್ರ ಹಣಕಾಸು ಸಚಿವರ ಭೇಟಿ ಕರ್ನಾಟಕ ಗ್ರಾಮೀಣ ಬ್ಯಾಂಕಿಗೆ ತುಂಬಾ ಮಹತ್ವ ನೀಡಿದೆ.


ಬಳಿಕ ಸಚಿವರು ಮಾತನಾಡಿ, ಬ್ಯಾಂಕಿನ ಪ್ರಗತಿ ಬಗ್ಗೆ ಮೆಚ್ಚುಗೆ ಸೂಚಿಸಿದರು. ಆರ್ಥಿಕ ಚಟುವಟಿಕೆಗಳ ಮೂಲಕ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯನ್ನು ತೀವ್ರಗೊಳಿಸಬೇಕಾದ ಅವಶ್ಯಕತೆ ಇದ್ದು ಗ್ರಾಮೀಣ ಬ್ಯಾಂಕು ಮಹತ್ತರವಾದ ಪಾತ್ರವಹಿಸಬೇಕಾಗಿದೆ ಎಂದರು. 

ಗ್ರಾಮೀಣ ಬ್ಯಾಂಕುಗಳ ಪಾತ್ರವನ್ನು ಇನ್ನಷ್ಟು ಪರಿಣಾಮಕಾರಿಗೊಳಿಸಲು ಗ್ರಾಮೀಣ ಬ್ಯಾಂಕುಗಳನ್ನು ವಿಲೀನಗೊಳಿಸಿ ರಾಜ್ಯಕ್ಕೆ ಒಂದೇ ಗ್ರಾಮೀಣ ಬ್ಯಾಂಕ್ ಸ್ಥಾಪಿಸಲಾಗಿದೆ. ಈ ಕಾರಣಕ್ಕೆ ಗ್ರಾಮೀಣ ಭಾಗದ ಜನರ ಆರ್ಥಿಕ ಬೇಡಿಕೆಗನುಸರಿಸಿ ಸಾಲ ಯೋಜನೆಗಳನ್ನು ರೂಪಿಸಲು ತಿಳಿಸಿದ ಅವರು ಬ್ಯಾಂಕೇತರ ವಲಯಗಳನ್ನು ಗುರುತಿಸಿ ಹೊಸ ಶಾಖೆಗಳನ್ನು ತೆರೆಯುವ ಪ್ರಕ್ರಿಯೆಯನ್ನು ತೀವ್ರಗೊಳಿಸಲು ತಿಳಿಸಿದರು. 


ಕೃಷಿ ಉನ್ನತೀಕರಣ ಮತ್ತು ಮೌಲ್ಯ ವರ್ಧನೆಗೆ ಸಂಬಂಧಿಸಿ ಸೂಕ್ತ ಸಾಲ ಯೋಜನೆ ರೋಪಿಸಲು ತಿಳಿಸಿದ ಅವರು ಕೃಷಿ ಉತ್ಪನ್ನಗಳ ಸಂಸ್ಕರಣೆ, ರೈತ ಉತ್ಪಾದಕ ಸಂಸ್ಥೆಗಳಿಗೆ ಸಾಲ ಯೋಜನೆಯ ಮೂಲಕ ಪ್ರೋತ್ಸಾಹವನ್ನು ಮುಂದುವರೆಸಲು ತಿಳಿಸಿದರು. 

ಡಿಜಿಟಲೈಜೇಶನ್ ಗ್ರಾಮೀಣ ಭಾಗಕ್ಕೆ ಪರಿಣಾಮಕಾರಿಯಾಗಿ ತಲುಪಿಸಬೇಕಾದ ಕಾರ್ಯವನ್ನು ಗ್ರಾಮೀಣ ಬ್ಯಾಂಕ್ ಮುಂದಿನದಿನಗಳಲ್ಲಿ ವ್ಯವಸ್ಥಿತವಾಗಿ ಮಾಡಲಿ ಎಂದ ಅವರು  ಕರ್ನಾಟಕ ಗ್ರಾಮೀಣ ಬ್ಯಾಂಕು ಕೇಂದ್ರ ಸರ್ಕಾರದ ಸಾಮಾಜಿಕ ಸುರಕ್ಷಾ ಯೋಜನೆಗಳ ಅನುಷ್ಠಾನದಲ್ಲಿ ಉತ್ತಮ ಸಹಬಾಗಿತ್ವ ತೋರಿರುವುದನ್ನು ಅವರು ಶ್ಲಾಘಿಸಿದರು.

ಕೇಂದ್ರ ಹಣಕಾಸು ಇಲಾಖೆಯ ಕಾರ್ಯದರ್ಶಿ ಎಂ. ನಾಗರಾಜು ಮಾತನಾಡಿ, ಗ್ರಾಮೀಣ ಬ್ಯಾಂಕುಗಳು ಗ್ರಾಮೀಣ ಭಾಗದ ಚಿತ್ರಣವನ್ನು ಬದಲಿಸುವ ಶಕ್ತಿ ಹೊಂದಿದ್ದು ಕೇಂದ್ರ ಸರ್ಕಾರ ಗ್ರಾಮೀಣ ಬ್ಯಾಂಕುಗಳನ್ನು ಬಲಪಡಿಸಲು ಎಲ್ಲ ಕ್ರಮಗಳನ್ನು ಕೈಗೊಂಡಿದೆ ಎಂದರು.

ಕರ್ನಾಟಕ ಗ್ರಾಮೀಣ ಬ್ಯಾಂಕಿನ ಅಧ್ಯಕ್ಷ ಶ್ರೀಕಾಂತ ಎಂ. ಭಂಡಿವಾಡ ಬ್ಯಾಂಕಿನ ಕಾರ್ಯಕ್ಷಮತೆಯ ಮುಖ್ಯಾಂಶಗಳನ್ನು ಪ್ರಸ್ತುತಪಡಿಸಿದರಲ್ಲದೆ ಸಾಮಾಜಿಕ ಭದ್ರತಾ ಯೋಜನೆಗಳ ಅನುಷ್ಠಾನದಲ್ಲಿ ಬ್ಯಾಂಕು ವಿವಿಧ ರಂಗಗಳಲ್ಲಿ ಅಗ್ರಸ್ಥಾನದಲ್ಲಿದೆ ಎಂದರು.

ಕೆನರಾ ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕ ಎಸ್.ಕೆ. ಮಾಜುಮದಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.

ಗ್ರಾಮೀಣಾಭಿವೃದ್ಧಿಗೆ ಗ್ರಾಮೀಣ ಬ್ಯಾಂಕುಗಳ ಕೊಡುಗೆಯನ್ನು ಹೆಚ್ಚಿಸಲು ನಬಾರ್ಡ್ ಎಲ್ಲಾ ರೀತಿಯಲ್ಲೂ ಬೆಂಬಲ ಮತ್ತು ಪ್ರೋತ್ಸಾಹ ನೀಡುತ್ತಿದೆ ಎಂದು ನಬಾರ್ಡ್ ಅಧ್ಯಕ್ಷ ಕೆ.ವಿ. ಶಾಜಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಹಣಕಾಸು ಇಲಾಖೆಯ ಜಂಟಿ ಕಾರ್ಯದರ್ಶಿ ಮನೋಜ್ ಎಂ. ಅಯ್ಯಪ್ಪನ್, ನಿರ್ದೇಶಕ ಸುಶೀಲ್ ಕುಮಾರ್ ಸಿಂಗ್, ಬಳ್ಳಾರಿಯ ಸಿಇಒ ಎಂಡಿ ಹ್ಯಾರಿಸ್ ಸುಮೈರ್ ಮತ್ತಿತರರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article