ಬಿಹಾರ ಚುನಾವಣೆ- ಬಿಜೆಪಿಗೆ ಸೋಲಿನ ಭೀತಿ: ಸಂತೋಷ್ ಲಾಡ್ ವ್ಯಂಗ್ಯ
ಮತಗಳ್ಳತನದ ವಿರುದ್ದ ಜನಜಾಗೃತಿ ಹೋರಾಟಕ್ಕೆ ಬೆಂಬಲವಾಗಿ ಬಂಟ್ವಾಳ ಯುವ ಕಾಂಗ್ರೆಸ್ ವತಿಯಿಂದ ಶುಕ್ರವಾರ ರಾತ್ರಿ ಕೈಕಂಬ-ಪೊಳಲಿ ದ್ವಾರದಿಂದ ಬಿ ಸಿ ರೋಡು ಜಂಕ್ಷನ್ ವರೆಗೆ ನಡೆದ ಬೃಹತ್ ಪಂಜಿನ ಮೆರವಣಿಗೆಯ ಬಳಿಕ ಮಿನಿ ವಿಧಾನಸೌಧ ಮುಂಭಾಗ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದರು.
ಭಾಷಣದುದ್ದಕ್ಕೂ ಬಿಜೆಪಿ ವಿರುದ್ದ ಟೀಕಾ ಪ್ರಹಾರಗೈದ ಸಚಿವ ಸಂತೋಷ್ ಲಾಡ್ ಲೋಕಸಭಾ ಚುನಾವಣೆಯಲ್ಲಿ ತಿರಸ್ಕರಿಸಿದ ಜನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸುವುದರ ಹಿಂದೆ ಬೇಕಾಬಿಟ್ಟಿ ಮತ ಹೆಚ್ವಳ ಕಾರಣವಾಗಿದೆ ಮತಕಳ್ಳತನ ಹಾಗೂ ಸುಳ್ಳುಗಳೇ ಬಿಜೆಪಿಯ ರಾಜಕಾರಣದ ಮೂಲ ಸೊತ್ತಾಗಿದೆ ಎಂದು ಕುಟುಕಿದರು.
ಬಿಜೆಪಿ ಸರಕಾರದ ದುರಡಾಳಿತವನ್ನು ಬೀದಿಗೆ ತಂದು ಹೋರಾಟ ಮಾಡುವುದರಲ್ಲಿ ಕಾಂಗ್ರೆಸ್ ಕೂಡ ವಿಫಲವಾಗಿದೆ ಎಂದ ಸಚಿವ ಲಾಡ್ ಮೋದಿ ಅಧಿಕಾರಕ್ಕೇರಿದ ಬಳಿಕ ದೇಶದಲ್ಲಿ ಯಾವುದೇ ರೀತಿಯ ಅಭಿವೃದ್ದಿ ಪರ ಚರ್ಚೆಗಳೇ ನಡೀತಿಲ್ಲ.ಕೇವಲ ಹಿಂದು-ಮುಸ್ಲಿಂ ವಿಚಾರಗಳನ್ನೇ ಮಾತನಾಡುವ ಮೂಲಕ ಜನರನ್ನು ಮರುಳು ಮಾಡಲಾಗುತ್ತಿದೆ. ಅಧಿಕಾರ ಯಾವತ್ತೂ ಶಾಶ್ವತ ಅಲ್ಲ, ಅಧಿಕಾರಾವಧಿಯಲ್ಲಿ ಜನರಿಗಾಗಿ ಕೆಲಸ ಮಾಡಿದರೆ ಅದು ಮಾತ್ರ ಶಾಶ್ವತ ಎಂದರು.
ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ,ಮನಮೋಹನ್ ಸಿಂಗ್ ಸರಕಾರ ದೇಶದಲ್ಲಿ ಅತ್ಯುತ್ತಮವಾಗಿ ಕೆಲಸ ಮಾಡಿದೆ. ಆರ್ಥಿಕ ಸ್ಥಿತಿಯನ್ನು ಸ್ಥಿರವಾಗಿಟ್ಟುಕೊಂಡು ಮನಮೋಹನ್ ಸಿಂಗ್ ಆಡಳಿತ ನಡೆಸಿದ್ದಾರೆ. ಜಗತ್ತಿನಾದ್ಯಂತ ಆರ್ಥಿಕ ಸ್ಥಿತಿ ಹದಗೆಟ್ಟಗಲೂ ಮನಮೋಹನ್ ಸಿಂಗ್ ಆಡಳಿತಾವಧಿಯಲ್ಲಿ ದೇಶದ ಒಂದೇ ಒಂದು ಬ್ಯಾಂಕ್ ಕೂಡಾ ದಿವಾಳಿಯಾಗಿರಲಿಲ್ಲ ಎಂದರು.
ಮೋದಿ ಅಧಿಕಾರಾವಧಿಯಲ್ಲಿ ಜನರಿಗಾಗಿ ಯಾವುದೇ ಕಾರ್ಯಕ್ರಮಗಳೂ ಜಾರಿಗೆ ಬಂದಿಲ್ಲ. ದೇಶದ ವಿವಿಧೆಡೆ ನಡೆದಿರುವ ಮತ ಕಳ್ಳತನ ಪ್ರಕರಣದಂತೆ ಬಂಟ್ವಾಳದ ಅಜ್ಜಿಬೆಟ್ಟು ಬೂತ್ ಸಹಿತ ಕೆಲವೆಡೆ ಇಂತಹ ಪ್ರಕರಣ ನಡೆದಿರುವ ಸಾಧ್ಯತೆ ಇದೆ ಎಂದು ರೈ ಆರೋಪಿಸಿದರು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ.ಗಫೂರ್, ರಾಜ್ಯ ಬೀಜ ಮತ್ತು ಸಾವಯವ ನಿಗಮದ ಅಧ್ಯಕ್ಷೆ ಲಾವಣ್ಯ ಬಲ್ಲಾಳ್ , ಮಾಜಿ ಜಿ.ಪಂ.ಸದಸ್ಯರಾದ ಎಂ.ಎಸ್.ಮಹಮ್ಮದ್, ಚಂದ್ರಪ್ರಕಾಶ್ ಶೆಟ್ಟಿ,ಪದ್ಮಶೇಖರಜೈನ್, ಮಾಜಿ ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ, ಕೆಪಿಸಿಸಿ ಸದಸ್ಯ ಪಿಯೂಸ್ ರೋಡ್ರಿಗಸ್, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಲಕೃಷ್ಣ ಅಂಚನ್, ಬೂಡಾ ಅಧ್ಯಕ್ಷ ಬೇಬಿ ಕುಂದರ್, ಬಂಟ್ವಾಳ ಯುವ ಕಾಂಗ್ರೆಸ್ ಅಧ್ಯಕ್ಷ ವಿನಯ ಕುಮಾರ್ ಸಿಂಧ್ಯಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಜ್ವಲ್, ಪುರಸಭಾಧ್ಯಕ್ಷ ವಾಸು ಪೂಜಾರಿ ಲೊರೆಟ್ಟೋ, ಪಕ್ಷದ ಮುಖಂಡರಾದ ಪದ್ಮನಾಭರೈ, ಐಡಾ ಸುರೇಶ್ ,ಚಂದ್ರಶೇಖರ ಪೂಜಾರಿ,ವೆಂಕಪ್ಪ ಪೂಜಾರಿ ಬಂಟ್ವಾಳ,ಸುದೀಪ್ ಕುಮಾರ್ ರೈ,ಮಹಮ್ಮದ್ ನಂದಾವರ, ಚಿತ್ತರಂಜನ್ ಶೆಟ್ಟಿ, ಲುಕ್ಮಾನ್, ಮಧುಸೂಧನ್ ಶೆಣೈ, ಜಯಂತಿ ಪೂಜಾರಿ, ಮಲ್ಲಿಕಾ ಶೆಟ್ಟಿ ಮತ್ತಿತರರಿದ್ದರು.
ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಭಂಡಾರಿ ಸ್ವಾಗತಿಸಿದರು.ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಇಬ್ರಾಹಿಂ ನವಾಜ್ ಪ್ರಸ್ತಾವನೆಗೈದರು.
ಬಾಲಕೃಷ್ಣ ಕೋಡಾಜೆ ಕಾರ್ಯಕ್ರಮ ನಿರೂಪಿಸಿದರು.