ಯುವಜನತೆ ಸೈಬರ್ ಅಪರಾಧಗಳ ಕುರಿತು ಜಾಗೃತರಾಗಿರಬೇಕು: ಶಿವಕುಮಾರ್ ಬಿ.
Thursday, October 30, 2025
ಬಂಟ್ವಾಳ: ಮಾಹಿತಿ ತಂತ್ರಜ್ಞಾನವು ವೇಗವಾಗಿ ಬೆಳೆಯುತ್ತಿರುವ ಪ್ರಸಕ್ತ ದಿನಗಳಲ್ಲಿ ಅಪರಾಧಗಳು ಕೂಡ ಹೆಚ್ಚುತ್ತಿದ್ದು, ಯುವಜನತೆ ಸೈಬರ್ ಅಪರಾಧಗಳ ಕುರಿತು ಜಾಗೃತರಾಗಿರಬೇಕೆಂದು ಬಂಟ್ವಾಳ ಗ್ರಾಮಾಂತರ ಠಾಣೆಯ ಇನ್ಸ್ ಪೆಕ್ಟರ್ ಶಿವಕುಮಾರ್ ಬಿ ಅವರು ಹೇಳಿದ್ದಾರೆ.
ಸಿದ್ಧಕಟ್ಟೆ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ‘ಸೈಬರ್ ಅಪರಾಧ ಜಾಗೃತಿ’ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳನ್ನುದ್ದೇಶಿಸಿ ಅವರು ಮಾತನಾಡಿದರು.
ಅಪರಿಚಿತವಾದ ಅಂತರ್ ಜಾಲ ಕೊಂಡಿಗಳನ್ನು ತೆರೆಯಬಾರದು,ಒಟಿಪಿ ಮೂಲಕ ಹಣ ಸೆಳೆದು ವಂಚನೆ ಮಾಡುವ ಜಾಲ ಒಂದೆಡೆಯಾದರೆ, ಯುವಕ- ಯುವತಿಯರನ್ನು ಯಾಮಾರಿಸಿ ಬ್ಲಾಕ್ಮೇಲ್ ಮಾಡುವ ದಂಧೆಯು ವ್ಯಾಪಕವಾಗಿ ನಡೆಯುತ್ತಿದೆ ಎಂದ ಅವರು ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳನ್ನು ಬಳಸುವಾಗ ಎಚ್ಚರ ವಹಿಸಿದರೆ ವಂಚಕರಿಗೆ ಬಲಿಯಾಗದಂತೆ ನೋಡಿಕೊಳ್ಳಬಹುದು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಡಾ.ಗಿರೀಶ ಭಟ್, ಸೈಬರ್ ಅಪರಾಧಗಳು ಕೂಡ ಇಂದು ವೈವಿಧ್ಯಮಯವಾಗಿವೆ. ಅಪರಿಚಿತರ ಜೊತೆಗೆ ದೂರವಾಣಿ ಸಂವಹನ ಮಾಡುವಾಗ ಎಚ್ಚರ ವಹಿಸಬೇಕು,ಸಾಮಾಜಿಕ ಜಾಲತಾಣಗಳ ವ್ಯಸನಕ್ಕೆ ಒಳಗಾಗದೆ ಅವುಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ.ಹರಿಪ್ರಸಾದ್ ಬಿ. ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು