ದರ್ಬೆ ವೃತ್ತಕ್ಕೆ ಅಂಬೇಡ್ಕರ್ ನಾಮಕರಣ: ದಲಿತ ಸಂಘಟನೆಗಳ ಆಗ್ರಹ

ದರ್ಬೆ ವೃತ್ತಕ್ಕೆ ಅಂಬೇಡ್ಕರ್ ನಾಮಕರಣ: ದಲಿತ ಸಂಘಟನೆಗಳ ಆಗ್ರಹ


ಪುತ್ತೂರು: ಪುತ್ತೂರಿನಲ್ಲಿ ಯಾವುದೇ ವೃತ್ತಕ್ಕೆ ಅಂಬೇಡ್ಕರ್ ಹೆಸರು ಇಟ್ಟಿಲ್ಲ. ಹಾಗಾಗಿ ದರ್ಭೆ ವೃತ್ತಕ್ಕೆ ನಿವೃತ್ತ ತಹಶೀಲ್ದಾರ್ ಕೋಚಣ್ಣ ರೈ ಅವರ ಹೆಸರು ಇಡಬೇಕು. ಕಳೆದ 9 ವರ್ಷಗಳಿಂದ ಈ ಬಗ್ಗೆ ಮನವಿ ನೀಡಲಾಗುತ್ತಿದೆ. ಕೋಚಣ್ಣ ರೈ ಅವರ ಹೆಸರನ್ನು ಬೇರೆ ಸರ್ಕಲ್ ಗೆ ಇಡಿ ಎಂದು ದಲಿತ ಸಂಘಟನೆಗಳ ಮುಖಂಡರು ಆಗ್ರಹಿಸಿದರು. 

ಬುಧವಾರ ತಾಪಂ ಸಭಾಂಗಣದಲ್ಲಿ ಪ್ರಭಾರ ತಹಶೀಲ್ದಾರ್ ನಾಗರಾಜ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಕುಂದುಕೊರತೆ ಸಭೆ ನಡೆಯಿತು.

 ದರ್ಭೆ ವೃತ್ತಕ್ಕೆ  ಕೋಚಣ್ಣ ರೈ ಅವರ ಹೆಸರು ಇಡುವಂತೆ ಉಚ್ಛ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ ಎಂದು ನಗರಸಭೆಯ ಅಧಿಕಾರಿ ಮಾಹಿತಿ ನೀಡಿದರು. ಇದರಿಂದ ಕೆರಳಿದ ಸೇಸಪ್ಪ ನೆಕ್ಕಿಲು, ಗಿರಿಧರ್ ನಾಯ್ಕ್, ಅಣ್ಣಪ್ಪ ಕಾರೆಕ್ಕಾಡು ಮತ್ತಿತರರು ನ್ಯಾಯಾಲಯದಲ್ಲಿ ಪ್ರಕರಣ ಯಾವ ಸ್ಥಿತಿಯಲ್ಲಿದೆ. ಕೇಸ್ ನಂಬರ್ ಕೂಡಾ ನಮೂದಿಸಿಲ್ಲ. ದರ್ಭೆ ವೃತ್ತಕ್ಕೆ ಅಂಬೇಡ್ಕರ್ ವೃತ್ತ ಎಂದು ನಾಮಕರಣ ಮಾಡಲೇಬೇಕು ಎಂದು ಆಗ್ರಹಿಸಿದರು. ಈ ಬಗ್ಗೆ ಸಂಜೆಯೊಳಗೆ ಮಾಹಿತಿ ನೀಡುವುದಾಗಿ ತಹಶೀಲ್ದಾರ್ ತಿಳಿಸಿದರು. 

ತಾಲೂಕು ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಬನ್ನೂರಿನಲ್ಲಿ ಜಾಗ ಗುರುತಿಸಲಾಗಿದೆ. ಆದರೆ ಇಲ್ಲಿ ಕುರಿ-ಆಡುಗಳ ವಧಾಗೃಹ ಇದೆ. ಈ ಜಾಗದ ವಿಚಾರವಾಗಿ ಪ್ರಕರಣ ನ್ಯಾಯಾಲಯದಲ್ಲಿದೆ. ನಮಗೆ ಬೇರೆ ಜಾಗ ಕೊಟ್ಟರೆ ತೆರವು ಮಾಡುತ್ತೇವೆ ಎಂದವರು ತಿಳಿಸಿದ್ದಾರೆ. ಈ ವಿಚಾರದಲ್ಲಿ ತಾಲೂಕಿನ ದಂಡಾಧಿಕಾರಿ ಮಧ್ಯಪ್ರವೇಶಿಸಿ ಪ್ರಕರಣವನ್ನು ಇತ್ಯರ್ಥ ಮಾಡಬೇಕು ಎಂದು ದಲಿತ ಸಂಘಟನೆಗಳ ಮುಖಂಡರು ಆಗ್ರಹಿಸಿದರು.

ಬಿ.ಕೆ ಅಣ್ಣಪ್ಪ ಹಾಗೂ ಮುಖೇಶ್ ಕೆಮ್ಮಿಂಜೆ ಅವರು ವಿಷಯ ಪ್ರಸ್ತಾಪಿಸಿ ಅವರಿಗೆ 15 ಸೆಂಟ್ಸ್ ಜಾಗ ಬೇರೆಡೆ ನೀಡಬೇಕು. ಇದು ಇವತ್ತಿನ ಬೇಡಿಕೆಯಲ್ಲ. ಹಲವು ವರ್ಷಗಳಿಂದ ಒತ್ತಾಯಿಸುತ್ತಲೇ ಇದ್ದೇವೆ. ಅಂಬೇಡ್ಕರ್ ಭವನ ನಿರ್ಮಾಣಕ್ಕೆ ತಕ್ಷಣ ವ್ಯವಸ್ಥೆ ಮಾಡಬೇಕು ಎಂದರು. 

ಬ್ಯಾಂಕ್‌ಗಳು ಸಾಲ ನೀಡುತ್ತಿಲ್ಲ..

ಎಸ್.ಸಿ., ಎಸ್. ಟಿ. ಸಮುದಾಯಕ್ಕೆ ಯಾವ ಬ್ಯಾಂಕಿನಿಂದಲೂ ಸಾಲ ಸಿಗುತ್ತಿಲ್ಲ. ತಾಲೂಕು ಕಚೇರಿಯಲ್ಲಿ ಸಾಲಕ್ಕಾಗಿ ನಿರಪೇಕ್ಷಣಾ ಪತ್ರ ನೀಡುವುದಿಲ್ಲ. ಇವರಿಗೆ ಮಂಜೂರಾದ ಭೂಮಿಗಳು ಪಿ.ಟಿ.ಸಿ.ಎಲ್. ಕಾಯಿದೆಗೆ ಬರುವುದರಿಂದ ನಿರಾಪೇಕ್ಷಣಾ ಪತ್ರ ನೀಡಲು ತಹಶೀಲ್ದಾರ್‌ಗೆ ನಿಯಮಾನುಸಾರ ಅವಕಾಶ ಇಲ್ಲ ಎಂದು ಹೇಳಲಾಗುತ್ತಿದೆ. ಇದರಿಂದ ಸಮುದಾಯಕ್ಕೆ ಅನ್ಯಾಯವಾಗುತ್ತದೆ. ಸರ್ಕಾರ ನಿರಾಕ್ಷೇಪಣಾ ಪತ್ರ ನೀಡಬಾರದು ಎಂಬ ನಿಯಮ ಮಾಡಿ ಅನ್ಯಾಯ ಎಸಗಲಾಗುತ್ತಿದೆ. ಈ ಬಗ್ಗೆ ಅಗತ್ಯ ನಿರ್ಣಯ ಮಾಡಿ ಸರ್ಕಾರಕ್ಕೆ ಕಳುಹಿಸಬೇಕು ಎಂದು ಸಭೆಯಲ್ಲಿ ಮುಖಂಡರು ಒತ್ತಾಯಿಸಿದರು. 

ಉಪ್ಪಿನಂಗಡಿ ವಸತಿ ನಿಲಯ ಬಾಡಿಗೆಕಟ್ಟಡದಲ್ಲಿದ್ದು, ಹೊಸ ಕಟ್ಟಡಕ್ಕೆ ಬಂದ ಅನುದಾನ ಹಿಂದೆ ಹೋಗಿದೆ. ಈಗ ಮಕ್ಕಳು ಶೋಚನೀಯ ಪರಿಸ್ಥಿತಿಯಲ್ಲಿ ಇದ್ದು, ಅಗತ್ಯ ಕ್ರಮಕೈಗೊಳ್ಳಬೇಕು. ಈಶ್ವರಮಂಗಲದಲ್ಲಿ ಕೊಳವೆಬಾವಿ ಕೊರೆಸದೆ ಬಿಲ್ಲು ಮಾಡಲಾಗಿದೆ. ಇಂತಹ ಘಟನೆ ನಡೆಯದಂತೆ ಎಚ್ಚರ ವಹಿಸಬೇಕು. ಬೆಟ್ಟಂಪಾಡಿ ಇರ್ದೆಯಲ್ಲಿ 13 ಸಮುದಾಯ ಮನೆಗಳಿಗೆ ಸರಿಯಾದ ರಸ್ತೆಯಿಲ್ಲ. ಈ ಬಗ್ಗೆ ಹೋರಾಟ ಮಾಡಿದರೆ 14 ಮಂದಿಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ. ಇದನ್ನು ತಕ್ಷಣ ಹಿಂಪಡೆಯುವ ಕಾರ್ಯವಾಗಬೇಕು ಎಂದು ಆಗ್ರಹಿಸಿದರು.

ಫೋಕ್ಸೋ ಪ್ರಕರಣದ ಸಂತ್ರಸ್ತೆ ದಲಿತ ಬಾಲಕಿಗೆ ಮನೆ ನಿರ್ಮಿಸಿಕೊಡಬೇಕು. ಆರೋಪಿಯ ಬೆದರಿಕೆಯಿಂದ ಆಕೆ ಡಿಎನ್ ಎ ಪರೀಕ್ಷೆಗೆ ಒಪ್ಪುತ್ತಿಲ್ಲ. ಪೊಲೀಸರಿಗೆ ದೂರು ನೀಡಿದರೂ ಸೂಕ್ತಕ್ರಮ ಕೈಗೊಳ್ಳುತ್ತಿಲ್ಲ ಎಂದು ಅಣ್ಣಪ್ಪ ಕಾರೆಕ್ಕಾಡು ಒತ್ತಾಯಿಸಿದರು. ಆಕೆಗೆ ಪರಿಹಾರ ನೀಡಲಾಗಿದೆ. ಮನೆ ಸ್ಥಳೀಯಾಡಳಿತದ ಮೂಲಕ ನೀಡಬೇಕಾಗುತ್ತದೆ. ಆಕೆಯ ಮನೆಗೆ ಭೇಟಿ ನೀಡಿ ಪರಿಶೀಲನೆ ಮಾಡುವುದಾಗಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ತಿಳಿಸಿದರು. 

ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಸುನಿತಾ ಕುಮಾರಿ ವೇದಿಕೆಯಲ್ಲಿದ್ದರು.. ಪ್ರಮುಖರಾದ ಸೇಸಪ್ಪ ನೆಕ್ಕಿಲು, ಮುದ್ದ, ಗಿರಿಧರ್ ನಾಯ್ಕ, ಮುಖೇಶ್ ಕೆಮ್ಮಿಂಜೆ, ಅಣ್ಣಪ್ಪ ಬಿ. ಕೆ., ಕಿಟ್ಟ ಅಜಿಲ ಮೊದಲಾದವರು ಚರ್ಚೆಯಲ್ಲಿ ಪಾಲ್ಗೊಂಡರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article