ಸೇತುವೆಯಲ್ಲಿ ರಿಕ್ಷಾ ನಿಲ್ಲಿಸಿ ನಾಪತ್ತೆಯಾಗಿದ್ದ ಚಾಲಕ ನೇತ್ರಾವತಿಯಲ್ಲಿ ಶವವಾಗಿ ಪತ್ತೆ
ಬುಧವಾರ ಮುಂಜಾನೆ 5:10 ರ ವೇಳೆಗೆ ಮನೆಯಿಂದ ಹೊರಟ ಇವರು ತನ್ನ ಬ್ಯಾಟರಿ ಚಾಲಿತ ಅಟೋ ರಿಕ್ಷಾವನ್ನು ಪಾಣೆಮಂಗಳೂರು ಹಳೆಯ ಸೇತುವೆಯಲ್ಲಿ ನಿಲ್ಲಿಸಿ ನಾಪತ್ತೆಯಾಗಿದ್ದರು. ಇವರು ನೇತ್ರಸವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಶಂಕೆ ವ್ಯಕ್ತವಾಗಿತ್ತು.
ಸೇತುವೆಯ ಮೇಲೆ ಅನಾಥ ಅಟೋ ರಿಕ್ಷಾ ನೋಡಿದ ಸ್ಥಳೀಯರು ಈ ಬಗ್ಗೆ ಬಂಟ್ವಾಳ ನಗರ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಸ್ಥಳೀಯ ಈಜುಪಟು ತಂಡ ಜೊತೆ ನದಿಯಲ್ಲಿ ಶೋಧ ಕಾರ್ಯ ನಡೆಸಿದ್ದರೂ ಸಂಜೆವರೆಗೂ ಚಾಲಕನ ಸುಳಿವು ದೊರೆತಿರಲಿಲ್ಲ.
ಗುರುವಾರ ಬೆಳಗ್ಗೆ ತುಂಬೆ ಡ್ಯಾಂ ಬಳಿಯ ತಲಪಾಡಿ ಎಂಬಲ್ಲಿ ನೀರಿನಲ್ಲಿ ಮರಕ್ಕೆ ಸಿಲುಕಿದ ರೀತಿಯಲ್ಲಿ ಮೃತದೇಹವೊಂದು ಪತ್ತೆಯಾಗಿದ್ದು, ಕಾಣೆಯಾದ ಪೀಟರ್ ಲೋಬೋ ಅವರದ್ದೇ ಎಂದು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಅಗ್ನಿ ಶಾಮಕ ಸಿಬ್ಬಂದಿಗಳು ಸ್ಥಳೀಯ ಈಜುಪಟುಗಳ ಸಹಕಾರದಲ್ಲಿ ಮೃತದೇಹ ಮೇಲಕ್ಕೆತ್ತಿ ಆಸ್ಪತ್ರೆಗೆ ಸಾಗಿಸಿದ್ದಾರೆ.
ಮೃತ ಪೀಟರ್ ಲೋಬೋ ಅವರು ಪಾಶ್ರ್ವವಾಯು ಪೀಡಿತರಾಗಿದ್ದು, ತನ್ನ ಖಾಯಿಲೆಯಿಂದ ಯಾರಿಗೂ ಅವಲಂಬಿತನಾಗಬಾರದು ಎಂಬ ಉದ್ದೇಶದಿಂದ ಈ ಕೃತ್ಯ ಎಸಗಿದ್ದಾರೆ ಎಂದು ಅವರ ಪತ್ನಿ ಅನಿತಾ ಲೋಬೋ ಅವರು ನೀಡಿದ ದೂರಿನಂತೆ ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.