ಆನೆಗುಡ್ಡೆ ದೇವಳದ ಅರ್ಚರ ಮೇಲೆ ಹಲ್ಲೆ ನಡೆದಿಲ್ಲ: ಆಡಳಿತ ಮಂಡಳಿಯವರಿಂದ ಸ್ಪಷ್ಟನೆ
ಕುಂದಾಪುರ: ಕೆಲವು ದಿನಗಳಿಂದ ಫೇಸ್ ಬುಕ್, ವಾಟ್ಸಾಪ್ ಇತ್ಯಾದಿ ಸಾಮಾಜಿಕ ಜಾಲತಾಣಗಳಲ್ಲಿ ಆನೆಗುಡ್ಡೆ ದೇವಸ್ಥಾನದ ಅರ್ಚಕರ ಮೇಲೆ ಹಲ್ಲೆ ಎಂಬ ವಿಡಿಯೋ ಸುದ್ದಿಯೊಂದು ಹರಿದಾಡುತ್ತಾ, ಭಾರೀ ವೈರಲ್ ಆಗಿದ್ದು, ಈ ಬಗ್ಗೆ ಕುಂಭಾಸಿ ಆನೆಗುಡ್ಡೆ ದೇವಸ್ಥಾನದ ಆಡಳಿತ ಮಂಡಳಿಯವರು ಸ್ಪಷ್ಟೀಕರಣ ನೀಡಿದ್ದಾರೆ. ಹಲ್ಲೆ ಪ್ರಕರಣದಲ್ಲಿ ವಿಡಿಯೋದಲ್ಲಿ ಕಂಡುಬರುವ ವ್ಯಕ್ತಿ ಆನೆಗುಡ್ಡೆ ದೇವಸ್ಥಾನದ ಅರ್ಚಕರಲ್ಲ, ಈ ಹಲ್ಲೆ ಪ್ರಕರಣಕ್ಕೂ ದೇವಸ್ಥಾನಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ವಿಡಿಯೋದಲ್ಲಿ ಅರ್ಚಕರಂತೆ ಕಂಡುಬರುವ ಜನಿವಾರಧಾರಿ ವ್ಯಕ್ತಿಯೊಂದಿಗೆ ಕೆಲವು ಮಂದಿ ಮಾತಿನ ಚಕಮಕಿ ನಡೆಸಿ, ಹಲ್ಲೆ ನಡೆಸುವುದು ಕಂಡುಬರುತ್ತದೆ. ಇವರು ದೇವಸ್ಥಾನಕ್ಕೆ ಬಂದಿದ್ದ ಕುಂದಾಪುರದ ವ್ಯಕ್ತಿ, ಆನೆಗುಡ್ಡೆ ದೇವಸ್ಥಾನದ ಅರ್ಚಕರಲ್ಲ ಎನ್ನಲಾಗಿದೆ.
ಧರ್ಮಸ್ಥಳದ ಸೌಜನ್ಯ ಪರ ತಂಡವೊಂದು ಆನೆಗುಡ್ಡೆಗೆ ಬಂದಿದ್ದು, ಹೊರಭಾಗದ ವಾಹನ ನಿಲುಗಡೆ ಪ್ರದೇಶದಲ್ಲಿ ಈ ತಂಡದವರೊಳಗೆ ಚಕಮಕಿ ನಡೆದು ಹಲ್ಲೆ ನಡೆದಿತ್ತು ಎನ್ನಲಾಗಿದೆ. ಸ್ಥಳದಲ್ಲಿದ್ದ ಯಾರೋ ಇದನ್ನು ವಿಡಿಯೋ ಮಾಡಿ ಹರಿಯಬಿಟ್ಟು ಅರ್ಚಕರ ಮೇಲೆ ಹಲ್ಲೆ ಎಂಬ ವಿವರಣೆ ಕೊಟ್ಟಿದ್ದರು. ಅದು ವೈರಲ್ ಆಗಿ, ಸಾವಿರಾರು ಮಂದಿ ದೇವಳ ಕಚೇರಿಗೆ ಈ ಬಗ್ಗೆ ಕರೆ ಮಾಡುತ್ತಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ದೇವಸ್ಥಾನದವರು ಪ್ರಕಟಣೆ ನೀಡಿದ್ದಾರೆ.