ಮಾಯ್ ದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರ ದಿನಾಚರಣೆ: ಕ್ರೀಡಾಕೂಟ ಉದ್ಘಾಟನೆ
ಮಂಗಳೂರು ಕ್ಯಾಥೋಲಿಕ್ ಬೋರ್ಡ್ ಆಫ್ ಎಜುಕೇಶನ್ ಉಪಾಧ್ಯಕ್ಷ ಮೊನ್ಸಿಜ್ಞೊರ್ ಮ್ಯಾಕ್ಸಿಮ್ ಲಾರೆನ್ಸ್ ನೋರೊನ್ಹಾ ಅವರು ಕ್ರೀಡಾ ಧ್ವಜಾರೋಹಣ ನೆರವೇರಿಸಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.
ಮುಖ್ಯ ಅತಿಥಿ, ಮಂಗಳೂರು ಸಿಟಿ ಕ್ರೈಮ್ ಬ್ರ್ಯಾಂಚ್ ಪೊಲೀಸ್ ಇನ್ಸ್ಪೆಕ್ಟರ್ ರಫೀಕ್ ಕೆ.ಎಂ. ಮಾತನಾಡಿ, ಕ್ರೀಡೆ ನಮ್ಮಲ್ಲಿ ಧೈರ್ಯ, ಸಹಕಾರ, ಹೊಂದಿಕೊಂಡು ಹೋಗುವ ಗುಣವನ್ನು ಕಲಿಸುತ್ತದೆ. ಕ್ರೀಡಾಕೂಟದಲ್ಲಿ ಗೆದ್ದವರಿಗೆ ಸಂತೋಷವಾದರೆ, ಸೋತವರಿಗೆ ಪ್ರೇರಣೆಯಾಗುತ್ತದೆ. ಆದುದರಿಂದ ಕ್ರೀಡಾಕೂಟ ಜೀವನದ ಪಾಠಶಾಲೆಯಾಗಿದೆ ಎಂದು ಹೇಳಿದರು.
ಮಾಯ್ ದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ವಂ. ಲಾರೆನ್ಸ್ ಮಸ್ಕರೇನಸ್ ಪ್ರಾಸ್ತಾವಿಕವಾಗಿ ಮಾತನಾಡಿ, ವಂ. ಆಂಟನಿ ಪತ್ರಾವೋರವರು ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಿ ಪುತ್ತೂರಿಗೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಇಂದು ಅವರ ನೆನಪಿನಲ್ಲಿ ಕ್ರೀಡಾಕೂಟ ಆಯೋಜಿಸಲಾಗುತ್ತದೆ. ನಮ್ಮ ಸಂಸ್ಥೆಗಳು ಬೆಳಗಿ ಜ್ಞಾನದ ಕಿರಣಗಳು ಜಗತ್ತಿನಾದ್ಯಂತ ಪಸರಿಸಿಲಿ ಎಂದು ಶುಭಹಾರೈಸಿದರು.
ಸಂತ ಫಿಲೋಮಿನಾ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಶಿಕ್ಷಕಿ ಸಿಸ್ಟರ್ ಲೋರಾ ಪಾಯಸ್ ಸ್ವಾಗತಿಸಿದರು. ಸಂತ ಫಿಲೋಮಿನಾ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಪ್ರಾರ್ಥನಾ ಗೀತೆ ಹಾಡಿದರು. ಶಿಕ್ಷಕಿ ಜಾಸ್ಮಿನ್ ಗೋವಿಯಸ್ ಅತಿಥಿಗಳ ಪರಿಚಯ ಮಾಡಿದರು. ಶಿಕ್ಷಕಿ ವಿದ್ಯಾಶ್ರೀ ವಂದಿಸಿ ಶಿಕ್ಷಕಿಯರಾದ ದೀಪ್ತಿ ಮತ್ತು ಸರಿತಾ ಗೊನ್ಸಾಲ್ವಿಸ್ ಕಾರ್ಯಕ್ರಮ ನಿರೂಪಿಸಿದರು. ಮಾಯ್ ದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಹಿರಿಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ಶಿಕ್ಷಕರು, ಶಿಕ್ಷಕರು, ಉಪನ್ಯಾಸಕರು, ಸಿಬಂದಿಗಳು ಸಹಕರಿಸಿದರು.