ಬಹುಮುಖ ಪ್ರತಿಭಾನ್ವಿತ ನಿವೃತ್ತ ಶಿಕ್ಷಕ ಗುಂಡ್ಮಿ ರಾಮಚಂದ್ರ ಐತಾಳರಿಗೆ ಪ್ರಶಸ್ತಿ

ಬಹುಮುಖ ಪ್ರತಿಭಾನ್ವಿತ ನಿವೃತ್ತ ಶಿಕ್ಷಕ ಗುಂಡ್ಮಿ ರಾಮಚಂದ್ರ ಐತಾಳರಿಗೆ ಪ್ರಶಸ್ತಿ


ಕುಂದಾಪುರ: ನ.8 ರಂದು ನಡೆಯುವ ಕೋಟ ವರುಣ ತೀರ್ಥವೇದಿಕೆಯ ‘ನಿರಂತರ’ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಗುಂಡ್ಮಿಯ ನಿವೃತ್ತ ಶಿಕ್ಷಕ ಜಿ. ರಾಮಚಂದ್ರ ಐತಾಳ ಆಯ್ಕೆಯಾಗಿರುತ್ತಾರೆ ಎಂದು ವರುಣ ತೀರ್ಥವೇದಿಕೆಯ ಅಧ್ಯಕ್ಷ ಉದಯ ದೇವಾಡಿಗ ಪ್ರಕಟಿಸಿದ್ದಾರೆ.

ವ್ಯಕ್ತಿ ಪರಿಚಯ ಮತ್ತು ಜೀವನ ಚರಿತ್ರೆ:

ಗುಂಡ್ಮಿ ರಾಮಚಂದ್ರ ಐತಾಳರು ಉಡುಪಿ ಜಿಲೆಯ ಗುಂಡ್ಮಿಯಲ್ಲಿ ಶಂಕರನಾರಾಯಣ ಐತಾಳ ಮತ್ತು ಲಕ್ಷ್ಮೀ ದಂಪತಿಗಳ ಸುಪುತ್ರರಾಗಿ ಜನಿಸಿದರು. ಇವರಿಗೆ ಮೂವರು ಸಹೋದರಿಯರು ಹಾಗೂ ಓರ್ವ ಸಹೋದರರಿರುವರು.

ತಮ್ಮ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಕಾರ್ಕಡದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲಾ ಶಿಕ್ಷಣ ಕೋಟ ವಿವೇಕ ಪ್ರೌಢಶಾಲೆಯಲ್ಲಿ ಪಡೆದು, ಬೆಂಗಳೂರಿನಲ್ಲಿ 1974ರಲ್ಲಿ, ಶಿಕ್ಷಕರ ತರಬೇತಿ ಪಡೆದರು.

ಶಿಕ್ಷಕ ವ್ಯಕ್ತಿಗೆ ಬೇಕಾದ ತರಬೇತಿ ಗಳಿಸಿಕೊಂಡಿದ್ದರೂ ಅಷ್ಟು ಸುಲಭದಲ್ಲಿ ಇವರಿಗೆ ಉದ್ಯೋಗವು ದೊರಕದೆ 1974-76ರವರೆಗೆ ಶಿವಮೊಗ್ಗದ ಹೋಟೆಲೊಂದರಲ್ಲಿ ಕಾರ್ಮಿಕರಾಗಿ ದುಡಿದಿದ್ದರು.

ಕುಟುಂಬ ಪರಿಚಯ:

ಶ್ರೀಯುತರ ಪತ್ನಿ ದೇವಕಿ. ಈ ದಂಪತಿಗೆ ಮೂವರು ಮಕ್ಕಳು. ಇವರ ಮಕ್ಕಳೆಲ್ಲರೂ ಪದವಿಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವಾಗ ಪಾರಂಪಳ್ಳಿ ನರಸಿಂಹ ಐತಾಳರಿಂದ ಏಕಪಾತ್ರಾಭಿನಯದಲ್ಲಿ ಮಾರ್ಗದರ್ಶನ ಪಡೆದು, ರಾಜ್ಯಮಟ್ಟದ ಏಕಪಾತ್ರಾಭಿನಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಗಳಿಸಿರುವುದು ಹೆಮ್ಮೆಯ ವಿಷಯವಾಗಿದೆ.

ಶಿಕ್ಷಕ ತರಬೇತಿ, ಯಕ್ಷಗಾನ, ನಾಟಕ, ಚಲನಚಿತ್ರಗಳಲ್ಲಿ. ಆಸಕ್ತಿ ಮತ್ತು ಅಭಿರುಚಿ, ಉತ್ತಮ ಪಾತ್ರಧಾರಿ, ಬರವಣಿಗೆಯಲ್ಲಿ ಆಸಕ್ತಿ. ಕಲಾಸಕ್ತಿಯುಳ್ಳ, ಮಕ್ಕಳಿಗೆ/ ಶಿಕ್ಷಕರಿಗೆ ಪ್ರೇರಣಾಶಕ್ತಿ. ಸಮಾಜ ಸೇವಾಕರ್ತರಾಗಿರುವ ಇವರು 1976ರಲ್ಲಿ ಮಣೂರಿನ ಶ್ರೀ ರಾಮಪ್ರಸಾದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ನೇಮಕಗೊಂಡರು. ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಲೇ ಇವರು ಹವ್ಯಾಸಿ ಕಲಾವಿದರಾಗಿ ಯಕ್ಷಗಾನ ಹಾಗೂ ನಾಟಕಗಳಲ್ಲಿ ಭಾಗವಹಿಸುತ್ತಿದ್ದರು. ಕಲಾರಂಗದಲ್ಲೂ ತಮ್ಮದೇ ಆದ ಹೆಜ್ಜೆ ಗುರುತನ್ನು ಮೂಡಿಸಿದ್ದರು. ಶಿಕ್ಷಣ ಕ್ಷೇತ್ರದಲ್ಲಿ ಸುದೀರ್ಘ 39 ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು.

ರಾಮಚಂದ್ರ ಐತಾಳರು ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ನಂತರ ಪೂರ್ಣಪ್ರಮಾಣದ ಕಲಾಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಯಕ್ಷಗಾನ ನಾಟಕಗಳಲ್ಲಿ ಸಕ್ರಿಯರಾಗಿರುವುದರ ಜೊತೆಯಲ್ಲಿ ಕವನ, ಮಕ್ಕಳ ನಾಟಕಗಳ ರಚನಾಕಾರರಾಗಿ ಬರವಣಿಗೆಯ ಕ್ಷೇತ್ರದಲ್ಲಿ ತೊಡಗಿಕೊಂಡಿರುವರು.

ಐತಾಳರ 30ಕ್ಕೂ ಹೆಚ್ಚು ‘ಕುಂದಗನ್ನಡ’ದ ಪ್ರಹಸನಗಳು ಪ್ರದರ್ಶಿತಗೊಂಡು ಜನಮನ್ನಣೆಗಳಿಸಿವೆ. ದೂರದರ್ಶನದ ‘ಯು’ ವಾಹಿನಿಯ ‘ಗಮ್ಜಲ್’ ವೇದಿಕೆಯಲ್ಲಿ ಪ್ರದರ್ಶನಗೊಂಡು ಬಹುಮಾನವನ್ನು ಗಳಿಸಿದ್ದರು.

ಕರಾವಳಿ ಪ್ರದೇಶದ ಯಕ್ಷಗಾನ ಸೊಗಡಿನ ಕಲೆಯಾದ ‘ಹೂವಿನ ಕೋಲು’ ಬಗ್ಗೆ, ಮಕ್ಕಳಲ್ಲಿ ಆಸಕ್ತಿಯನ್ನು ಚಿಗುರಿಸಿ, ಅವರಲ್ಲಿ ಅಭಿರುಚಿಯನ್ನು ಬೆಳೆಸಿದ ಕೀರ್ತಿಯು ಐತಾಳರಿಗೆ ಸಲ್ಲುತ್ತದೆ.ಈಎಲ್ಲ ಸಾಧನೆಗೆ ಅನೇಕ ಪುರಸ್ಕಾರ, ಸನ್ಮಾನಗಳು ಲಭಿಸಿವೆ. ಈ ಮಹಾನ್ ಸಾಧಕನಿಗೆ ಇದೀಗ ವರುಣತೀರ್ಥ ವೇದಿಕೆಯ ಪ್ರತಿಷ್ಠಿತ ನಿರಂತರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಒಲಿದು ಬಂದಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article