ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೋಟ ಸುರೇಶ್ ಬಂಗೇರ
Thursday, October 30, 2025
ಕುಂದಾಪುರ: ಉಡುಪಿ ತಾಲೂಕು ಮಣೂರು-ಪಡುಕೆರೆ ಎಂಬಲ್ಲಿ 1965ರಲ್ಲಿ ಬೇಡು ಮರಕಾಲ ಮತ್ತು ಅಕ್ಕಮ್ಮ ದಂಪತಿಯ ಮಗನಾಗಿ ಜನಿಸಿದ ಸುರೇಶ ಬಂಗೇರರು ಆರಂಭದಲ್ಲಿ ಏಕಲವ್ಯನಂತೆ ಕಂಡು ಕೇಳಿ ಕಲಿತು ಉನ್ನತ ಮಟ್ಟಕ್ಕೆ ಏರಿದವರು. ಹಿರಿಯಕಲಾವಿದ ಶಿರಿಯಾರ ಮಂಜು ನಾಯ್ಕರ ಹೂವಿನ ಕೋಲಿನ ಬಾಲ ಕಲಾವಿದರಾಗಿ ಶಿರಿಯಾರದವರ ನಿಕಟ ಸಂಪರ್ಕವನ್ನು ಸಾಧಿಸಿ ಪ್ರೌಢ ಅರ್ಥಗಾರಿಕೆ, ರಂಗನೆಡೆಯನ್ನು ಕಲಿತು ಹದಿನಾರನೇ ವಯಸ್ಸಿನಲ್ಲಿ ಮಂದಾರ್ತಿ ಮೇಳದಲ್ಲಿ ಗೆಜ್ಜೆಕಟ್ಟಿದರು. ಸಹೋದರ ಸಂಬಂಧಿ ಮೊಳಹಳ್ಳಿ ಹೆರಿಯ ನಾಯ್ಕರನ್ನು ಗುರು ಸ್ಥಾನದಲ್ಲಿರಿಸಿಕೊಂಡು ಅವರೊಂದಿಗೆ ಮಂದಾರ್ತಿ ಮೇಳದಲ್ಲಿ ಗೆಜ್ಜೆಕಟ್ಟಿನಂತರ ದೀರ್ಘಕಾಲ ಸೌಕೂರು, ಸಾಲಿಗ್ರಾಮ, ಪೆರ್ಡೂರು, ಕಮಲಶಿಲೆ ಮೇಳದಲ್ಲಿ ಸೇವೆ ಸಲ್ಲಿಸಿ ಸದ್ಯ ಅಮ್ರತೇಶ್ವರೀ ಮೇಳದ ಪ್ರಧಾನ ವೇಷದಾರಿಯಾಗಿ ಜತೆಗೆ ಮೇಳದ ಪ್ರಬಂದಕರಾಗಿ ಸೇವೆ ಸಲ್ಲಿಸುತಿದ್ದಾರೆ.
ಪೌರಾಣಿಕ ಪ್ರಸಂಗದ ಕರ್ಣಾರ್ಜುನದ ಅರ್ಜುನ, ವೀರಮಣಿ ಕಾಳಗದ ಪುಷ್ಕಳ, ತಾಮ್ರದ್ವಜ, ಬೀಷ್ಮ ಪ್ರತಿಜ್ನೆಯ ದೇವವ್ರತನಾಗಿ ಜತೆಗೆ ಕೃಷ್ಣ, ಭೀಷ್ಮ, ಸುಧನ್ವ, ಅರ್ಜುನ, ರಾಮ, ವತ್ಸಾಕ್ಯ, ಚಂದ್ರಹಾಸನಂತ ಪಾತ್ರಗಳು ಹೆಚ್ಚು ಜನಪ್ರೀಯವಾಗಿವೆ. ಹೊಸ ಪ್ರಸಂಗಕ್ಕೂ ನ್ಯಾಯ ಒದಗಿಸಿದ ಇವರಿಗೆ ನಾಗಶ್ರೀ ಪ್ರಸಂಗದ ಶುಬ್ರಾಂಗನ ಪಾತ್ರ ಸಾಕಷ್ಟು ಹೆಸರು ತಂದುಕೊಟ್ಟಿತ್ತು. ಸತಿ ಶೀಮಂತಿನಿಯ ಚಂದ್ರಾಂಗದ, ಚಲುವೆ ಚಿತ್ರಾವತಿಯ ಹೇಮಾಂಗದ, ಬಾನು ತೇಜಸ್ವಿ ಮುಂತಾದ ಪಾತ್ರಗಳು ಅಷ್ಟೇ ಪ್ರಸಿದ್ಧಿ ನೀಡಿತ್ತು.
ಪತ್ನಿ ಸುಶಿಲಾ ಮಕ್ಕಳಾದ ಸುರಕ್ಷ ಮತ್ತು ಸಮರ್ಥರೊಂದಿಗೆ ಕೋಟ ಪಡುಕೆರೆಯಲ್ಲಿ ವಾಸವಾಗಿದ್ದಾರೆ. ಈ ಹಿಂದೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಜತೆಗೆ ಹಲವಾರು ಗೌರವಗಳು ಇವರಿಗೆ ಸಂದಿದೆ.