 
ಸಹಕಾರಿ ಸಂಘಕ್ಕೆ ಮೋಸ: ದೂರು ದಾಖಲು
ಕುಂದಾಪುರ: ಸಹಕಾರಿ ಸಂಘದಲ್ಲಿ ಕಡಿಮೆ ಗುಣಮಟ್ಟದ ಚಿನ್ನಾಭರಣಗಳನ್ನು ಅಡವು ಇಟ್ಟು ಮೋಸ ಮಾಡಿದ ಬಗ್ಗೆ ದೂರು ದಾಖಲಾಗಿದೆ. ಈ ಅಡವಿನ ಸಾಲದಿಂದ ಸಂಘಕ್ಕೆ ಆರ್ಥಿಕ ನಷ್ಟ ಮತ್ತು ನಂಬಿಕೆ ದ್ರೋಹ ಮಾಡಿರುವ ಆರೋಪದ ಮೇಲೆ ವಂಚನೆ ಪ್ರಕರಣ ದಾಖಲಾಗಿದೆ.
ಸಿಂಡಿಕೇಟ್ ರೈತರ ಸೇವಾ ಸಹಕಾರಿ ಸಂಘ (ನಿ), ಕೊಕ್ಕರ್ಣೆ ಶಾಖೆಗೆ ಯಶವಂತ ಕುಮಾರ್ ಎಂಬವರು ಬಂದು ಕೆಲವು ಚಿನ್ನಾಭರಣಗಳಾದ ಬಳೆ, ಚೈನ್ 69.400 ಗ್ರಾಂ ಆಗಿದ್ದು, ಗರಿಷ್ಠ ಸಾಲ ನೀಡಲು ಕೇಳಿಕೊಂಡಿದ್ದರು. ಅದರಂತೆ ಸಂಘದ ಅಪ್ರೈಸರ್ ಆದ ಕೆ. ಭಾಸ್ಕರ ಆಚಾರ್ಯ ರವರು ಚಿನ್ನಾಭರಣಗಳನ್ನು ಪರೀಕ್ಷಿಸಿ 5,20,500 ರೂ. ಸಾಲ ನೀಡಬಹುದೆಂದು ದೃಢೀಕರಣ ನೀಡಿದ್ದು, ಅದರ ಆಧಾರದ ಮೇಲೆ 4,60,000 ರೂ. ಸಾಲ ನೀಡಲಾಗಿತ್ತು. ಕೆಲವು ದಿನಗಳ ಬಳಿಕ ಅಡವಿರಿಸಿದ್ದ ಚಿನ್ನಾಭರಣಗಳನ್ನು ಪರೀಕ್ಷಿಸಿದಾಗ ಅವೆಲ್ಲ ಅಲ್ಪ ಗುಣಮಟ್ಟದ್ದೆಂದು ಅಪ್ರೈಸರ್ ತಿಳಿಸಿದರು. ಆ ನಂತರ ಯಶವಂತ ಸಂಪರ್ಕಕ್ಕೆ ಸಿಕ್ಕಿರುವುದಿಲ್ಲ.
ಆರೋಪಿಯು ಕಡಿಮೆ ಗುಣಮಟ್ಟದ ಚಿನ್ನಾಭರಣಗಳನ್ನು ಸಂಘದಲ್ಲಿ ಅಡವು ಇಟ್ಟು ಸಾಲ ಪಡೆದು ಸಂಘಕ್ಕೆ ಆರ್ಥಿಕ ನಷ್ಟ ಮತ್ತು ನಂಬಿಕೆ ದ್ರೋಹ ಮಾಡಿರುತ್ತಾರೆ. ಆರೋಪಿಯೊಂದಿಗೆ ಉಮಾನಾಥ ಶೆಟ್ಟಿ ಎಂಬಾತನು ಶಾಮೀಲು ಇರುವ ಬಗ್ಗೆ ಸಂದೇಹವಿರುವುದಾಗಿ ಶಾಖಾ ವ್ಯವಸ್ಥಾಪಕಿ ಸುರೇಖಾ ಕುಮಾರಿ ಬ್ರಹ್ಮಾವರ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಪ್ರಕರಣ ದಾಖಲಾಗಿದೆ.