ಸೌಜನ್ಯ ತಾಯಿ ಕುಸುಮಾವತಿ ಸೇರಿ 20ಕ್ಕೂ ಅಧಿಕ ಮಂದಿ ವಿರುದ್ಧ ಪ್ರಕರಣ
ಮಂಗಳೂರು: ಸೌಜನ್ಯಾ ಪರ ಹೋರಾಟಗಾರರ ವಿರುದ್ಧ ಪೊಲೀಸರು ಸುಳ್ಳು ಪ್ರಕರಣ ದಾಖಲಿಸುತ್ತಿದ್ದಾರೆ ಎಂದು ಆರೋಪಿಸಿ ತಹಶೀಲ್ದಾರರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸುವ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿದ್ದರೂ ಅ.27ರಂದು ಬೆಳ್ತಂಗಡಿ ಮಿನಿ ವಿಧಾನ ಸೌಧದ ಎದುರು ಅಕ್ರಮ ಕೂಟ ಸೇರಿ ಸಾರ್ವಜನಿಕರಿಗೆ ತೊಂದರೆಯುಂಟು ಮಾಡಿದ ಆರೋಪದಲ್ಲಿ ಸೌಜನ್ಯಾ ಪರ ಹೋರಾಟಗಾರರು ಸೇರಿದಂತೆ 20ಕ್ಕೂ ಅಧಿಕ ಮಂದಿಯ ವಿರುದ್ಧ ಬೆಳ್ತಂಗಡಿ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸೌಜನ್ಯಾಳ ತಾಯಿ ಕುಸುಮಾವತಿ, ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಅಧ್ಯಕ್ಷ ಅನಿಲ್ ಕುಮಾರ್ ಅಂತರ, ಪ್ರಜ್ವಲ್ ಗೌಡ, ಪ್ರದೀಪ್ ಕುಲಾಲ್, ಶ್ರೀನಿವಾಸ ಗೌಡ, ರವೀಂದ್ರ ಶೆಟ್ಟಿ, ಪ್ರಸನ್ನ ರವಿ, ಉದಯ ಪ್ರಸಾದ್, ವೆಂಕಪ್ಪ ಕೋಟ್ಯಾನ್, ತನುಷ್ ಶೆಟ್ಟಿ, ಮೋಹನ್ ಶೆಟ್ಟಿ, ಜಯರಾಮ ಗೌಡ, ಸಂತೋಷ್ ಶೆಟ್ಟಿ, ಪ್ರಮೋದ್ ಶೆಟ್ಟಿ, ಯೋಗೀಶ್ ಕುಲಾಲ್, ನಾರಾವಿ ವಿಜಯ, ರವೀಂದ್ರ ಶೆಟ್ಟಿ ಮುಡಿಪು, ಶಶಿಕಲಾ ಶೆಟ್ಟಿ, ಪೂಜಾಶ್ರೀ ಧರ್ಮಸ್ಥಳ, ಟಿಕ್ಕಿ ರವಿ ಹಾಗೂ ಇತರರ ವಿರುದ್ಧ ಬಿ.ಎನ್.ಎಸ್. 189(2), 190, 285, 57 ಕರ್ನಾಟಕ ಪೊಲೀಸ್ ಆಕ್ಟ್ 1963 31(o) 103(ii) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಎಸ್‌ಐಟಿ ಇನ್ಸ್‌ಪೆಕ್ಟರ್‌ಗೆ ಭಡ್ತಿ..
ಮಂಗಳೂರು: ಧರ್ಮಸ್ಥಳ ಗ್ರಾಮದ ಸುತ್ತಮುತ್ತ ನೂರಾರು ಶವಗಳನ್ನು ಹೂತು ಹಾಕಲಾಗಿದೆ ಎಂಬ ಆರೋಪದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ(ಎಸ್‌ಐಟಿ)ದಲ್ಲಿದ್ದ ಇನ್ಸ್‌ಪೆಕ್ಟರ್ ಮಂಜುನಾಥ ಗೌಡರಿಗೆ ಕರ್ನಾಟಕ ಲೋಕಾಯುಕ್ತ ಡಿವೈಎಸ್ಪಿ ಆಗಿ ಭಡ್ತಿ ನೀಡಲಾಗಿದೆ.
ಬುರುಡೆ ಪ್ರಕರಣದ ಆರೋಪಿ ಚಿನ್ನಯ್ಯನಿಗೆ ಬೆದರಿಸಿ ವಿಡಿಯೋ ಹೇಳಿಕೆ ಕೊಡಿಸಿದ್ದಾರೆ ಎಂದು ಮಂಜುನಾಥ ಗೌಡ ವಿರುದ್ಧ ತಿಮರೋಡಿ, ತಂಡ ಗಂಭೀರ ಆರೋಪ ಮಾಡಿತ್ತು. ಇದಲ್ಲದೆ
ಅನಾಥ ಶವಗಳ ಉತ್ಖನನ ವೇಳೆ ಪಾಯಿಂಟ್ ನಂಬರ್ 2,3,4 ನ್ನು ಅಗೆಯುವಾಗ ಆರೋಪಿ ಚಿನ್ನಯ್ಯನ ಷಡ್ಯಂತ್ರದ ಬಗ್ಗೆ ಇನ್ಸ್‌ಪೆಕ್ಟರ್ ಮಂಜುನಾಥ ಗೌಡ ವಿಡಿಯೋ ಮಾಡಿ ಬಯಲಿಗೆಳೆದಿದ್ದರು. ಹೀಗಾಗಿ ಎಸ್‌ಐಟಿ ತನಿಖಾ ತಂಡದಿಂದ ಮಂಜುನಾಥ ಗೌಡರನ್ನು ಹೊರಗಿಡುವಂತೆ ತಿಮರೋಡಿ, ತಂಡ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಪಟ್ಟುಹಿಡಿದಿತ್ತು. ಅಲ್ಲದೆ ಮಂಜುನಾಥಗೌಡರನ್ನು ಅಮಾನತು ಮಾಡಲು ಸರ್ಕಾರಕ್ಕೆ ಮನವಿ ಕೂಡ ಮಾಡಿದ್ದರು. ಇದೀಗ ಡಿವೈಎಸ್ಪಿಯಾಗಿ ಮುಂಭಡ್ತಿ ಪಡೆದು ಮಂಜುನಾಥ ಗೌಡ ಅವರು ಎಸ್‌ಐಟಿಯಲ್ಲೇ ಕಾರ್ಯನಿರ್ವಹಿಸಲಿದ್ದಾರೆ.