ಸೂಟರ್ಪೇಟೆ ಪ್ರಜ್ವಲ್ ಯುವಕ ಮಂಡಲದಿಂದ ಅ.26 ರಂದು ‘ಬಲೇ ಗೊಬ್ಬುಗ ಕೆಸರ್ಡೊಂಜಿ ದಿನ’
ಮಂಗಳೂರು: ಕ್ರೀಡೆ, ಕಲೆ, ಸಾಹಿತ್ಯ, ಸಾಂಸ್ಕೃತಿಕ, ಸಾಮಾಜಿಕ, ಧಾರ್ಮಿಕ ಸೇವೆಗಳನ್ನೊಳಗೊಂಡ ಸಮ್ಮಿಲಿತ ಕಾರ್ಯಗಳಿಗೆ ಆದ್ಯತೆ ನೀಡುತ್ತಿರುವ ಪ್ರಜ್ವಲ್ ಯುವಕ ಮಂಡಲ (ರಿ) ಸೂಟರ್ಪೇಟೆ ಇದರ ಆಶ್ರಯದಲ್ಲಿ ‘ಬಲೇ ಗೊಬ್ಬುಗ ಕೆಸರ್ಡೊಂಜಿ ದಿನ’ ಎನ್ನುವ ಗ್ರಾಮೀಣ ಕೆಸರು ಗದ್ದೆ ಕ್ರೀಡಾಕೂಟವನ್ನು ಅ.26 ರಂದು ನಗರದ ಎಕ್ಕೂರಿನಲ್ಲಿರುವ ಕೃಷಿ ವಿಜ್ಞಾನ ಕೇಂದ್ರ ಫಿಶರೀಸ್ ಕಾಲೇಜು ಆವರಣದ ಗದ್ದೆಯಲ್ಲಿ ನಡೆಯಲಿದೆ.
ಕೆಸರು ಗದ್ದೆಯಲ್ಲಿ ಮಕ್ಕಳಿಗೆ, ಹುಡುಗ-ಹುಡುಗಿಯರಿಗೆ, ಪುರುಷರಿಗೆ ಹಾಗೂ ಮಹಿಳೆಯರಿಗೆ ವಿಶೇಷ ಗ್ರಾಮೀಣ ಕ್ರೀಡಾ ಸ್ಪರ್ಧೆಗಳು ನಡೆಯಲಿವೆ.
6 ವಿಭಾಗಗಳಲ್ಲಿ ಕೆಸರು ಓಟ ಮತ್ತು ಹಿಮ್ಮುಖ ಓಟ, 2 ವಿಭಾಗಗಳಲ್ಲಿ ಕಂಬಳ ಓಟ, 2 ವಿಭಾಗಗಳಲ್ಲಿ ಪಾಲೆ ಬಂಡಿ, 4 ವಿಭಾಗಗಳಲ್ಲಿ ರಿಲೇ ಓಟ, 2 ವಿಭಾಗಗಳಲ್ಲಿ ಗೂಟ ಸುತ್ತುವ ಓಟ, 2 ವಿಭಾಗಗಳಲ್ಲಿ ಕೊಡಪಾನಕ್ಕೆ ನೀರು ತುಂಬಿಸುವ ಸ್ಪರ್ಧೆ, ಗಂಡ-ಹೆಂಡತಿಗೆ ಉಪ್ಪು ಮೂಟೆ ಸ್ಪರ್ಧೆ, ಅಲ್ಲದೆ ಕೆಸರಿನಲ್ಲಿ ನಿಧಿ ಶೋಧನೆ (ಬಂಗಾರದ ನಾಣ್ಯ) ಹಾಗೂ ಸಾರ್ವತ್ರಿಕ ಮಡಕೆ ಒಡೆಯುವ ಸ್ಪರ್ಧೆಗಳು ನಡೆಯಲಿವೆ.
ಗುಂಪು ಸ್ಪರ್ಧೆಗಳು:
ಗುಂಪು ಸ್ಪರ್ಧೆಗಳಲ್ಲಿ ಪುರುಷರಿಗೆ, ಮಹಿಳೆಯರಿಗೆ ಹಗ್ಗ ಜಗ್ಗಾಟ, ಮಹಿಳೆಯರ ತ್ರೋಬಾಲ್, ಪುರುಷರಿಗೆ ವಾಲಿಬಾಲ್ ಸ್ಪರ್ಧೆಗಳು ನಡೆಯಲಿವೆ. ವಿಜೇತರಿಗೆ ನಗದು ಬಹುಮಾನ ಮತ್ತು ಶಾಶ್ವತ ಫಲಕಗಳನ್ನು ನೀಡಲಾಗುವುದು. ಮಾತ್ರವಲ್ಲ ಕಾರ್ಯಕ್ರಮದಲ್ಲಿ ನಿರಂತರ ಎದುರು ಕಥೆ, ತುಳು ಶಬ್ದ ಹಾಗೂ ತುಳು ಚುಟುಕುಗಳ ಸ್ಪರ್ಧೆ ನಡೆಯಲಿದೆ. ಪುಟ್ಟ ಮಕ್ಕಳಿಗೆ ಕೆಸರಲ್ಲಿ ಆಡುವ ಪ್ಲೇ ಏರಿಯಾವನ್ನು ನಿರ್ಮಿಸಲಾಗುವುದು.
3ನೇ ಬಾರಿ ಬಲೇ ಗೊಬ್ಬುಗ:
ಪ್ರಜ್ವಲ್ ಯುವಕ ಮಂಡಲ 2017, 2023ರಲ್ಲಿ ಬಲೇ ಗೊಬ್ಬುಗ ಕೆಸರ್ಡೊಂಜಿ ದಿನ ಕಾರ್ಯಕ್ರಮವನ್ನು ಏರ್ಪಡಿಸುವಾಗ ಅಭೂತಪೂರ್ವ ಯಶಸ್ಸು ದೊರಕಿದೆ. ಇದೀಗ 3ನೇ ಬಾರಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಅವರ ಸಹಕಾರದಿಂದ ಹಾಗೂ ಅಸ್ತ್ರ ಗ್ರೂಫ್ ವೇದಿಕೆಯಲ್ಲಿ ಈ ಗ್ರಾಮೀಣ ಕ್ರೀಡಾಕೂಟವನ್ನು ಪ್ರಜ್ವಲ್ ಯುವಕ ಮಂಡಲ ಹಮ್ಮಿಕೊಂಡಿದ್ದು ಮಾತ್ರವಲ್ಲ ಸ್ಪರ್ಧಿಗಳಿಗೆ ಹಾಗೂ ಸಾರ್ವಜನಿಕರಿಗೆ ಊಟೋಪಚಾರದ ವ್ಯವಸ್ಥೆಯನ್ನು ಮಾಡಲಾಗುವುದೆಂದು ಅಧ್ಯಕ್ಷ ಲೋಕೇಶ್ ಎಸ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.