ಧರ್ಮಸ್ಥಳ ಪ್ರಕರಣ: ಮತ್ತೆ ಬಂಗ್ಲೆಗುಡ್ಡೆಯತ್ತ ಎಸ್‌ಐಟಿ
ಮಂಗಳೂರು: ಏಳು ಅಸ್ಥಿಪಂಜರ ಪತ್ತೆಯಾದ ಬಂಗ್ಲೆಗುಡ್ಡೆ ಪ್ರದೇಶಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳ ಜತೆ ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ನೇತ್ರಾವತಿಯ ಬಂಗ್ಲೆಗುಡ್ಡೆ ಪ್ರದೇಶಕ್ಕೆ ಸೋಮವಾರಮಧ್ಯಾಹ್ನ 1 ಗಂಟೆಗೆ ಎಸ್.ಐ.ಟಿ ಅಧಿಕಾರಿಗಳು ಬೆಳ್ತಂಗಡಿ ಅರಣ್ಯ ಇಲಾಖೆ ಅಧಿಕಾರಿಗಳನ್ನು ಕರೆದುಕೊಂಡು ಬಂದು ಸರ್ವೆ ಕಾರ್ಯ ನಡೆಸುತ್ತಿದ್ದಾರೆ.
ಏಳು ಅಸ್ಥಿಪಂಜರ ಪತ್ತೆಯಾದ ಜಾಗವು ಅರಣ್ಯ ಇಲಾಖೆಗೆ ಸೇರಿದ ಜಾಗ ಎಂದು ಸರ್ವೆ ಮಾಡಿ ಎಸ್‌ಐಟಿ ಅಧಿಕಾರಿಗಳಿಗೆ ವರದಿ ನೀಡಲು ಆಗಮಿಸಿದ್ದಾರೆ ಎನ್ನಲಾಗಿದೆ.
ನಟ, ನಿರ್ದೇಶಕನ ಸಹೋದರನಿಗೆ ನೋಟೀಸ್..?
ಧರ್ಮಸ್ಥಳ ಗ್ರಾಮದ ಸುತ್ತಮುತ್ತ ನೂರಾರು ಶವಗಳನ್ನು ಹೂತಿಟ್ಟ ಆರೋಪದ ತನಿಖೆ ನಡೆಸುತ್ತಿರುವ ಎಸ್‌ಐಟಿ ಅನನ್ಯಾ ಭಟ್ ಕಟ್ಟು ಕತೆ ಸೃಷ್ಟಿಸಿದ ಪ್ರಕರಣದಲ್ಲಿ ಬಹುಭಾಷಾ ನಟ, ನಿರ್ದೇಶಕನ ಸಹೋದರನಿಗೆ ನೋಟಿಸ್ ನೀಡಲು ಮುಂದಾಗಿದೆ ಎನ್ನಲಾಗಿದೆ.
ಅನನ್ಯಾ ಭಟ್ ಬಗ್ಗೆ ಕಟ್ಟುಕತೆ ಕಟ್ಟಿದ ಸುಜಾತಾ ಭಟ್ ಎಲ್ಲರನ್ನು ನಂಬಿಸುವ ಕೆಲಸ ಮಾಡಿದ್ದರು. ಬಳಿಕ ಇದೆಲ್ಲವನ್ನು ಜಮೀನು ವಿಚಾರವಾಗಿ ಮಾಡಿರುವುದಾಗಿ ಒಪ್ಪಿಕೊಂಡಿದ್ದರು. ಇದೀಗ ಅನನ್ಯಾ ಭಟ್ ಕೇಸ್ ಮತ್ತೆ ಮುನ್ನೆಲೆಗೆ ಬಂದಿದ್ದು, ಪ್ರಕರಣದ ತನಿಖೆಯನ್ನು ಎಸ್‌ಐಟಿ ಮುಂದುವರಿಸಿದೆ
ವಾಸಂತಿ ಕೇಸ್ ಬಗ್ಗೆ ತನಿಖೆಗಿಳಿದಾಗ ಎಸ್‌ಐಟಿಗೆ ಬಹುಭಾಷಾ ನಟನ ಸಹೋದರನ ಹೆಸರು ಕೇಳಿಬಂದಿದೆ. ನಟನ ಸಹೋದರ ಕೂಡ ಕಾಲಿವುಡ್ ನಟನಾಗಿದ್ದು, ವಾಸಂತಿ ಗಂಡನ ಗೆಳೆಯ ಎಂದು ತಿಳಿದುಬಂದಿದೆ. ಸದ್ಯ ಕಾಲಿವುಡ್ ನಟ ಚೆನ್ನೈನಲ್ಲಿರುವುದಾಗಿ ಮಾಹಿತಿಯಿದ್ದು, ಆತನ ವಿಳಾಸ ಪತ್ತೆ ಮಾಡುವಲ್ಲಿ ಎಸ್‌ಐಟಿ ಕಾರ್ಯನಿರತವಾಗಿದೆ. ವಿಳಾಸ ಸಿಗದ ಹಿನ್ನೆಲೆ ನೋಟಿಸ್ ನೀಡಲು ವಿಳಂಬವಾಗಿದೆ.