ದ.ಕ. ಜಿಲ್ಲಾ ಕಾಂಗ್ರೆಸ್ ವತಿಯಿಂದ ಇಂದಿರಾ ಗಾಂಧಿ ಪುಣ್ಯ ಸ್ಮರಣೆ
Friday, October 31, 2025
ಮಂಗಳೂರು: ದ.ಕ. ಜಿಲ್ಲಾ ಕಾಂಗ್ರೆಸ್ ವತಿಯಿಂದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪುಣ್ಯ ಸ್ಮರಣೆ ಕಾರ್ಯಕ್ರಮ ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಶುಕ್ರವಾರ ನಡೆಯಿತು.
ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್ ಮಾತನಾಡಿ, ದೇಶದಲ್ಲಿ ತುರ್ತು ಪರಿಸ್ಥಿತಿ ಏರಿದ ಸಂದರ್ಭ ವಿರೋಧ ಪಕ್ಷದ ನಾಯಕರಿಗೆ, ವಿಚಿದ್ರಕಾರಿ ಶಕ್ತಿಗಳಿಗೆ ತೊಂದರೆ ಆಗಿರಬಹುದು, ಆದರೆ ಮಧ್ಯಮ ವರ್ಗ, ಬಡವರು, ದುರ್ಬಲ ವರ್ಗದವರಿಗೆ ಯಾರಿಗೂ ತೊಂದರೆ ಆಗಿಲ್ಲ. ಅವರೆಲ್ಲರಿಗೂ ಭದ್ರೆತೆ ಲಭಿಸಿದೆ. ಇಂದಿನ ಯಾವುದೇ ಸರ್ಕಾರಗಳು ಜಾರಿಗೆ ತರುವ ಜನಪರ ಯೋಜನೆಗಳಲ್ಲಿ ಇಂಧಿರಾ ಗಾಂಧಿ ಅವರ 20 ಅಂಶದ ಕಾರ್ಯಕ್ರಮ ಅಡಕವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಇಂಧಿರಾ ಗಾಂಧಿಯವರ ಜನಪರ ಕಾರ್ಯಕ್ರಮಗಳ ಹೆಸರು ಬದಲಾವಣೆ ಮಾಡಿರುವುದೇ ಅವರ ಸಾಧನೆ. ಮಹಾತ್ಮ ಗಾಂಧಿ, ನೆಹರೂ, ಇಂದಿರಾ ಗಾಂಧಿ ಅವರ ಹೆಸರನ್ನು ಇತಿಹಾಸ ಪುಟದಿಂದ ಮರೆಮಾಚಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಹೇಳಿದರು.
ಮಾಜಿ ಸಚಿವ ಬಿ. ರಮಾನಾಥ ರೈ ಮಾತನಾಡಿ, ಇಂದಿರಾ ಗಾಂಧಿ ಅವರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಧೀಮಂತ ಮಹಿಳೆ. ಅವರು ದೇಶದ ಏಕತೆಯ ದೃಷ್ಟಿಯಿಂದ ದಿಟ್ಟ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದರು. ಅವರ 20 ಅಂಶದ ಆರ್ಥಿಕ ಕಾರ್ಯಕ್ರಮಗಳು ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಕಾರಣವಾಗಿದೆ. ಗರೀಬಿ ಹಠಾವೊ, ಪಡಿತರ ಚೀಟಿ ಯೋಜನೆ, ಅಂಗನವಾಡಿ, ಹಸಿರು ಕ್ರಾಂತಿ, ಶ್ವೇತ ಕ್ರಾಂತಿ, ನೀಲ ಕ್ರಾಂತಿ, ಜಾತಿ ಪದ್ಧತಿ ನಿರ್ಮೂಲನೆ, ಬ್ಯಾಂಕುಗಳ ರಾಷ್ಟ್ರೀಕರಣ ಜಾರಿಗೊಳಿಸಿ ದೇಶದ ಆರ್ಥಿಕ ವೃದ್ಧಿಗೆ ಶಕ್ತಿ ತುಂಬಿದರು. ಸಾಲ ಮನ್ನ ಜಾರಿಗೆ ತಂದು ಜನ ಸಾಮಾನ್ಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಕಾರಣರಾದರು ಎಂದು ಸ್ಮರಿಸಿದರು.
ಈ ಸಂದರ್ಭ ಮಾಜಿ ಶಾಸಕ ಜೆ.ಆರ್.ಲೋಬೊ, ಕೆಪಿಸಿಸಿ ಮಾಜಿ ಪ್ರ.ಕಾರ್ದಯರ್ಶಿ ಪದ್ಮರಾಜ್ ಆರ್. ಪೂಜಾರಿ, ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ನಗದ ಅಧ್ಯಕ್ಷೆ ಎಸ್. ಅಪ್ಪಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಾಜಿ ಮೇಯರಾ ಶಶಿಧರ್ ಹೆಗ್ಡೆ, ಕೆ. ಅಶ್ರಫ್, ಬ್ಲಾಕ್ ಅಧ್ಯಕ್ಷ ಬಿ.ಎಲ್.ಪಿ. ಪದ್ಮನಾಭ ಕೋಟ್ಯಾನ್, ಜಿಲ್ಲಾ ಮುಂಚೂಣಿ ಘಟಕಾಧ್ಯಕ್ಷರಾದ ಇಬ್ರಾಹೀಂ ನವಾಝ್, ಕೆ.ಕೆ. ಶಾಹುಲ್ ಹಮೀದ್, ಶುಭಾಷ್ ಶೆಟ್ಟಿ ಕೊಲ್ನಾಡು, ಜೋಕಿಂ ಡಿಸೋಜಾ, ಉಷಾ ಅಂಚನ್, ಶೈಲಜಾ ಬಂಟ್ವಾಳ ಮತ್ತಿತರರು ಉಪಸ್ಥಿತರಿದ್ದರು.


