ಹೈಕೋರ್ಟ್ ಪೀಠ ಸ್ಥಾಪನೆಗಾಗಿ ಅಭಿಯಾನಕ್ಕೆ ಚಾಲನೆ
ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಈ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯು ಆನೇಕ ವರ್ಷಗಳ ಬೇಡಿಕೆಯಾಗಿದೆ. ಈ ಬೇಡಿಕೆ ಈಡೇರಲು ಇದೇ ರೀತಿಯ ಹೋರಾಟ ಮುಂದುವರಿಯಬೇಕಿದೆ ಎಂದರು.
ಮಂಗಳೂರಿನಿಂದ ಬಹಳಷ್ಟು ವ್ಯಾಜ್ಯಗಳು ಹೈಕೋರ್ಟ್‌ನಲ್ಲಿ ದಾಖಲಾಗುತ್ತಿದ್ದು, ಇದಕ್ಕಾಗಿ ನಾಗರಿಕರು ಪ್ರತಿ ವಿಚಾರಣೆಗೂ ಬೆಂಗಳೂರಿಗೆ ತೆರಳಬೇಕಾದ ಸ್ಥಿತಿ ಇದೆ. ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯಾದರೆ ಸುಲಭವಾಗಿ ಹೆಚ್ಚು ಖರ್ಚು ಇಲ್ಲದೆ ನ್ಯಾಯ ಸಿಗಲು ಸಾಧ್ಯ. ದ.ಕ ಜಿಲ್ಲೆಗೂ ಧಾರವಾಡ, ಕರಬುರಗಿ ರೀತಿಯಲ್ಲೇ ಹೈಕೋರ್ಟ್ ಪೀಠ ಬೇಕು ಎಂದು ನಳೀನ್ ಕುಮಾರ್ ಕಟೀಲ್ ಹೇಳಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಮೋನಪ್ಪ ಭಂಡಾರಿ, ಮಾತನಾಡಿ ಈ ಅಭಿಯಾನವನ್ನು ಯಶಸ್ವಿ ಯಾಗಿ ನಡೆಸುವುದಕ್ಕಾಗಿ ಸಮಿತಿ ರಚಿಸಲಾಗಿದೆ. ವಕೀಲರು, ಕಕ್ಷಿದಾರರು, ಚುನಾಯಿತ ಪ್ರತಿನಿಧಿಗಳು, ಸಾರ್ವಜನಿಕರನ್ನು ಸೇರಿಸಿಕೊಂಡು ಮುನ್ನಡೆಯಬೇಕಿದೆ ಎಂದರು.
6,000 ಪ್ರಕರಣಗಳು ಹೈಕೋರ್ಟ್ ವಿಚಾರಣೆಗೆ ಬಾಕಿ..
ಮಂಗಳೂರು ವಕೀಲರ ಸಂಘದ ಅಧ್ಯಕ್ಷ ರಾಘವೇಂದ್ರ ಎಚ್ ವಿ ಅವರು ಮಾತನಾಡಿ ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಭಾಗಕ್ಕೆ ಸಂಬಂಧಿಸಿದಂತೆ ಸುಮಾರು 6,000 ಪ್ರಕರಣಗಳು ಹೈಕೋರ್ಟ್‌ನಲ್ಲಿ ವಿಚಾರಣೆಯಲ್ಲಿ ಇವೆ. ಮಂಗಳೂರಿನಲ್ಲೇ ಹೈಕೋರ್ಟ್ ಪೀಠ ಸ್ಥಾಪನೆಯಾದರೆ ದ.ಕ, ಉಡುಪಿ ಅಲ್ಲದೆ, ಉ.ಕ, ಕೊಡಗು, ಚಿಕ್ಕಮಗಳೂರಿಗರಿಗೂ ಅನುಕೂಲವಾಗಲಿದೆ ಎಮದು ಮಾಹಿತಿ ನೀಡಿದರು.
ಹೈಕೋರ್ಟ್ ಪೀಠ ಸ್ಥಾಪನೆಗೆ ಒತ್ತಾಯಿಸಿ ದ.ಕ ಜಿಲ್ಲೆಯಿಂದ ಒಟ್ಟು 5,000 ಅಂಚೆಕಾರ್ಡ್ ಗಳನ್ನು ರಾಜ್ಯಪಾಲರು, ಮುಖ್ಯಮಂತ್ರಿ ಹಾಗೂ ಕಾನೂನು ಸಚಿವರಿಗೆ ಕಳುಹಿಸಲಾಗುತ್ತಿದೆ. ಮುಂದೆ ಸಾಮಾಜಿಕ ಮಾಧ್ಯಮಗಳ ಮೂಲಕವೂ ಅಭಿಯಾನ ಆರಂಭಿಸಲಾಗುವುದು ಎಂದು ರಾಘವೇಂದ್ರ ತಿಳಿಸಿದರು.
ಮಂಗಳೂರು ವಕೀಲರ ಸಂಘದ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜ, ಮಾಜಿ ರಾಜ್ಯಸಭಾ ಸದಸ್ಯ ಬಿ.ಇಬ್ರಾಹೀಂ, ಮಾಜಿ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ವಕೀಲರು ಉಪಸ್ಥಿತರಿದ್ದರು.