ಜಿಎಸ್‌ಟಿ ಇಳಿಕೆಯ ಕ್ರೆಡಿಟ್ ಕಾಂಗ್ರೆಸ್ ನವರಿಗೆ  ಬೇಕಾದರೆ ಮನೆ-ಮನೆಗೆ ಹಂಚಲಿ: ಅರುಣ್ ಜಿ. ಶೇಟ್

ಜಿಎಸ್‌ಟಿ ಇಳಿಕೆಯ ಕ್ರೆಡಿಟ್ ಕಾಂಗ್ರೆಸ್ ನವರಿಗೆ ಬೇಕಾದರೆ ಮನೆ-ಮನೆಗೆ ಹಂಚಲಿ: ಅರುಣ್ ಜಿ. ಶೇಟ್


ಮಂಗಳೂರು: ಕೇಂದ್ರ ಸರ್ಕಾರ ಜಿಎಸ್‌ಟಿ ಇಳಿಕೆ ಮಾಡಿದ್ದರೆ ರಾಜ್ಯ ಸರ್ಕಾರ ಪ್ರತಿಯೊಂದಕ್ಕೂ ಬೆಲೆ ಏರಿಕೆ ಮಾಡುತ್ತಿದೆ. ಈಗ ಜಿಎಸ್‌ಟಿ ಇಳಿಕೆ ವಿಚಾರವನ್ನು ಬಿಜೆಪಿ ಜನಪ್ರತಿನಿಧಿಗಳು ಮನೆ ಮನೆಗೆ ತಲುಪಿಸುತ್ತಿರುವುದನ್ನು ಕಾಂಗ್ರೆಸ್ ಮುಖಂಡರಿಗೆ ಸಹಿಸಲಾಗುತ್ತಿಲ್ಲ. ಮೋದಿ ಮಾಡಿದ ಜಿಎಸ್‌ಟಿ ಇಳಿಕೆಯ ಕ್ರೆಡಿಟ್ ಅವರಿಗೂ ಸಿಗಬೇಕಾದರೆ ಅವರೂ ಮನೆ ಮನೆಗೆ ಹಂಚಲಿ ಎಂದು ಬಿಜೆಪಿ ಜಿಲ್ಲಾ ವಕ್ತಾರ ಅರುಣ್ ಜಿ. ಶೇಟ್ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 8 ವರ್ಷಗಳಲ್ಲಿ ಹೆಚ್ಚುವರಿ ಜಿಎಸ್‌ಟಿ ವಸೂಲಿ ಮಾಡಿದ್ದನ್ನು ವಾಪಸ್ ಮಾಡಲಿ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಯುಪಿಎ ಸರ್ಕಾರ ಇದ್ದಾಗ ಪ್ರತ್ಯಕ್ಷ ಮಾತ್ರವಲ್ಲದೆ ಪರೋಕ್ಷ ತೆರಿಗೆಗಳೂ ಇದ್ದವು. ಅದನ್ನು ಬಿಜೆಪಿ ಸರ್ಕಾರ ಇಳಿಸಿದೆ. ಚಿನ್ನದ ದರ ಏರಿಕೆ ಅಂತಾರೆ, ಇದು ಅಂತಾರಾಷ್ಟ್ರೀಯ ಮಾರುಕಟ್ಟೆ ಅವಲಂಬಿತ. ಕಾಂಗ್ರೆಸ್ ಸರ್ಕಾರ ಇದ್ದಾಗ ಚಿನ್ನದ ಮೇಲಿದ್ದ ಶೇ.15 ಇಂಪೋರ್ಟ್ ಡ್ಯೂಟಿಯನ್ನು ಈಗ ಶೇ.6ಕ್ಕೆ ಇಳಿಸಲಾಗಿದೆ ಎಂದರು.

ರಾಜ್ಯದಲ್ಲಿ ಬಿಜೆಪಿ ಅವಧಿಯಲ್ಲಿ 38-39 ರೂ. ಇದ್ದ ಹಾಲಿನ ದರ ಈಗ 52 ರೂ. ಆಗಿದೆ. ಪೆಟ್ರೋಲ್ 3 ರೂ., ಡೀಸೆಲ್‌ಗೆ 5.50 ರೂ. ಏರಿಕೆಯಾಗಿದೆ. ಪಹಣಿಪತ್ರ ಪಡೆಯಲು 10 ರೂ. ಇದ್ದದ್ದನ್ನು 100 ರೂ. ಮಾಡಿದ್ದಾರೆ. ಸ್ಮಾರ್ಟ್ ಮೀಟರ್ 900 ರೂ. ಇದ್ದದ್ದು 8500 ರೂ. ಆಗಿದೆ. ಈಗ ವಿದ್ಯುತ್ ದರ ಏರಿಕೆಗೆ ಮುಂದಾಗಿದ್ದಾರೆ. ಜನರ ಲೂಟಿಗೆ ಇಳಿದ ಸರ್ಕಾರ ಯಾವುದು ಎಂದು ಪ್ರಶ್ನಿಸಿದರು.

ರಾಜ್ಯ ಸರ್ಕಾರ ದಿವಾಳಿಯಾಗಿದೆ. ರಾಜ್ಯದ ಆರ್ಥಿಕತೆ ಬಗ್ಗೆ ಇನ್ನೂ ಶ್ವೇತಪತ್ರ ಹೊರಡಿಸುತ್ತಿಲ್ಲ. ಬೊಮ್ಮಾಯಿ ಸರ್ಕಾರ ಇದ್ದಾಗಿನ ಉಳಿತಾಯ ಬಜೆಟ್ ಈಗ ಕೊರತೆ ಬಜೆಟ್ ಆಗಿದೆ. ಮಂಗಳೂರು ಮಹಾನಗರ ಪಾಲಿಕೆಗೆ ಕಳೆದೆರಡು ವರ್ಷಗಳಿಂದ ಯಾವುದೇ ಅನುದಾನವನ್ನು ರಾಜ್ಯ ಬಿಡುಗಡೆ ಮಾಡಿಲ್ಲ. ಇದರ ಚುನಾವಣೆಯನ್ನೂ ವಿಳಂಬ ಮಾಡುತ್ತಿದೆ. ಜನರ ಆಶಯಕ್ಕೆ ವಿರುದ್ಧವಾಗಿ ಕಾಂಗ್ರೆಸ್ ಸರ್ಕಾರ ನಡೆದುಕೊಳ್ತಿದೆ ಎಂದು ಅರುಣ್ ಶೇಟ್ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಕದ್ರಿ ಮನೋಹರ ಶೆಟ್ಟಿ, ರಮೇಶ್ ಹೆಗ್ಡೆ, ಸತೀಶ್ ಪ್ರಭು, ಡೊಂಬಯ್ಯ ಅರಳ ಇದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article