ಯಕ್ಷಗಾನಕ್ಕೆ ಹೊಸ ಬೆಳಕು ನೀಡಿದರು ಲೀಲಾವತಿ ಬೈಪಾಡಿತ್ತಾಯ: ಡಾ.ಎಂ. ಪ್ರಭಾಕರ ಜೋಶಿ
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಕಾಟಿಪಳ್ಳ ಶ್ರೀ ಮಹಾಗಣಪತಿ ಮಹಿಳಾ ಯಕ್ಷಗಾನ ಸಂಘದ ವತಿಯಿಂದ ಮಂಗಳೂರು ಉರ್ವಸ್ಟೋರ್‌ನ ತುಳು ಭವನದಲ್ಲಿ ಭಾನುವಾರ ವೃತ್ತಿಪರ ಯಕ್ಷಗಾನ ಮೇಳದ ಪ್ರಥಮ ಮಹಿಳಾ ಭಾಗವತರಾದ ದಿ. ಲೀಲಾವತಿ ಬೈಪಾಡಿತ್ತಾಯ ಅವರ ಸಂಸ್ಮರಣಾ ಗೋಷ್ಠಿ ಹಾಗೂ ಅವರ ಶಿಷ್ಯ ವೃಂದದ ಮಹಿಳಾ ಕಲಾವಿದರಿಂದ ತುಳು ಯಕ್ಷಗಾನ ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಸಂಸ್ಮರಣಾ ಉಪನ್ಯಾಸ ನೀಡಿದರು.
ಲೀಲಾವತಿ ಅವರು ವೃತ್ತಿಪರ ಮಹಿಳಾ ಭಾಗವತರಾಗಿ ಮೇಳದ ತಿರುಗಾಟ ನಡೆಸಿದಾಗ ಅವರ ಬಗ್ಗೆ ಸಹಾನುಭೂತಿ, ನಿರೀಕ್ಷೆ ಇತ್ತು. ಯಕ್ಷಗಾನ ಭಾಗವತರಾಗಿ ಯಾವುದೇ ಕಪ್ಪುಚುಕ್ಕೆ ಇಲ್ಲದ ವ್ಯಕ್ತಿತ್ವ ಅವರದ್ದು. ಮಧೂರಿನಂತಹ ಕಲಾಶ್ರೀಮಂತಿಕೆ ಇದ್ದ ಸ್ಥಳದಲ್ಲಿ ಹುಟ್ಟಿ ಬೆಳೆದ ಅವರ ಜೀವನದ ಹಾದಿ ಹರಿನಾರಾಯಣ ಬೈಪಾಡಿತ್ತಾಯ ಅವರನ್ನು ವಿವಾಹವಾದ ಬಳಿಕ ಬದಲಾಯಿತು. ಅವರ ಕೀರ್ತಿಯ ಶ್ರೇಯಸ್ಸು ಹರಿನಾರಾಯಣ ಅವರಿಗೂ ಸಲ್ಲಬೇಕು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್, ತುಳು ಯಕ್ಷಗಾನ ಸಹಿತ ಯಕ್ಷಗಾನ ಕ್ಷೇತ್ರಕ್ಕೆ ಲೀಲಾವತಿ ಬೈಪಾಡಿತ್ತಾಯ ಅವರು ದೊಡ್ಡ ಕೊಡುಗೆ ನೀಡಿದ್ದಾರೆ. ಅವರ ನೆನಪಿನಲ್ಲಿ ಮಹಿಳಾ ಕಲಾವಿದರಿಂದಲೇ ಯಕ್ಷಗಾನ ಪ್ರದರ್ಶನ ಆಯೋಜಿಸಲಾಗಿದೆ ಎಂದರು.
ಲೀಲಾವತಿ ಬೈಪಾಡಿತ್ತಾಯ ಅವರ ಪುತ್ರ ಅವಿನಾಶ್ ಬೈಪಾಡಿತ್ತಾಯ ಮಾತನಾಡಿ, ಯಕ್ಷಗಾನ ಮೇಳಗಳಲ್ಲಿ ತಿರುಗಾಟ ನಡೆಸಿದ ಅಮ್ಮ ಸಂಸಾರ ಹಾಗೂ ಮೇಳದ ತಿರುಗಾಟವನ್ನು ಸರಿದೂಗಿಸಿಕೊಂಡು ಹೋಗುತ್ತಿದ್ದರು. ಮೇಳದಲ್ಲಿ ಅಮ್ಮನಿಗೆ ಪ್ರತ್ಯೇಕ ಕೊಠಡಿಯ ವ್ಯವಸ್ಥೆಯಿತ್ತು. ಶಾಲೆಯ ರಜೆಯ ದಿನಗಳಲ್ಲಿ ಅಮ್ಮನ ಜತೆ ನಾವೂ ಮೇಳದಲ್ಲಿ ಇರುತ್ತಿದ್ದೆವು. ಇಂದಿನ ರೀತಿಯಲ್ಲಿ ಪ್ರಚಾರದ ವ್ಯವಸ್ಥೆ ಇಲ್ಲದ ದಿನಗಳಲ್ಲಿ ಅಮ್ಮನನ್ನು ಭಾಗವತಿಕೆ ನಡೆಯುತ್ತಿದ್ದ ಸ್ಥಳಕ್ಕೆ ಜನತೆ ಗೌರವಾದರದಿಂದ ಸ್ವಾಗತಿಸುತ್ತಿದ್ದರು ಎಂದು ನೆನಪಿಸಿಕೊಂಡರು.
ಲೀಲಾವತಿಯವರ ಶಿಷ್ಯ ನಾದಾ ಮಣಿನಾಲ್ಕೂರು ಅವರು ಬೈಪಾಡಿತ್ತಾಯ ಅವರ ಜೊತೆಗಿನ ಮೇಳದ ತಿರುಗಾಟದ ನೆನಪುಗಳ ಕುರಿತು ಮಾತನಾಡಿದರು. ಉರ್ವಸ್ಟೋರ್ ಶ್ರೀ ಮಹಾಗಣಪತಿ ದೇವಸ್ಥಾನದ ಅಧ್ಯಕ್ಷ ಎಸ್. ಸುರೇಂದ್ರ ರಾವ್, ಮಾಜಿ ಮೇಯರ್ ಶಶಿಧರ ಹೆಗ್ಡೆ, ಯಕ್ಷಗಾನ ಗುರು ಹಾಗೂ ಲೀಲಾವತಿಯವರ ಪತಿ ಹರಿನಾರಾಯಣ ಬೈಪಾಡಿತ್ತಾಯ ಉಪಸ್ಥಿತರಿದ್ದರು. ಅಕಾಡೆಮಿ ಸದಸ್ಯ ಸಂತೋಷ್ ಶೆಟ್ಟಿ ಹಿರಿಯಡ್ಕ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಪೂರ್ಣಿಮಾ ಯತೀಶ್ ರೈ ನಿರ್ದೇಶನ, ಭವ್ಯಶ್ರೀ ಕುಲ್ಕುಂದ ಹಾಗೂ ಶಾಲಿನಿ ಹೆಬ್ಬಾರ್ ಭಾಗವತಿಕೆಯಲ್ಲಿ ‘ತ್ಯಾಗೊದ ತಿರ್ಲ್’ ತುಳು ಯಕ್ಷಗಾನ ಪ್ರದರ್ಶನ ನಡೆಯಿತು.
ಯಕ್ಷಗಾನದ ರಾಗ, ಲಯ, ತಾಳ, ಕಾಲಪ್ರಭೇದ ಅರಿತು ಭಾಗವತಿಕೆ ನಡೆಸಿದ ಲೀಲಾವತಿ ಬೈಪಾಡಿತ್ತಾಯ ಅವರು ಯಕ್ಷಗಾನ ಗುರುವಾಗಿ ಅಪಾರ ಶಿಷ್ಯವೃಂದವನ್ನು ರೂಪಿಸಿದ್ದಾರೆ. ಭಾಗವತರ ಪ್ರಥಮ ಸಾಲಿನಲ್ಲಿ ನಿಲ್ಲುವ ಲೀಲಾವತಿ ಬೈಪಾಡಿತ್ತಾಯ ಅವರ ಪ್ರಜ್ಞೆ ಸಮಾಜದಲ್ಲಿ ಪುನರುತ್ಥಾನ ಆಗಬೇಕು ಎಂದು ಯಕ್ಷಗಾನ ಹಿರಿಯ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ ಹೇಳಿದರು.